

ಕಲಬುರಗಿ: ಕಂಕುಳಲ್ಲಿ ಹತ್ತು ತಿಂಗಳ ಕೂಸು, ತಲೆ ಮೇಲೆ ಚೀಲ ಹೊತ್ತು ತಾಯಿಯೊಬ್ಬಳು ಬರೋಬ್ಬರಿ 300 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಕ್ರಮಿಸಿರುವ ಮನಕಲಕುವ ಘಟನೆ ಬುಧವಾರ ವರದಿಯಾಗಿದೆ.
ಮುಂಬೈನಲ್ಲಿ ವಾಸವಿದ್ದ ಮಗುವಿನ ತಾಯಿ ಉಮಾದೇವಿ ಮತ್ತು ಏಳು ಜನ ವಲಸೆ ಕಾರ್ಮಿಕರ ತಂಡ ಲಾಕ್ಡೌನ್ ಹಿನ್ನೆಲೆಯಲ್ಲಿ ತೆಲಂಗಾಣದ ನಾರಾಯಣಪೇಟ್‌ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ಕಲಬುರಗಿಯ ಕಮಲಾಪುರ ಪಟ್ಟಣದ ಬಳಿ ಸಾರ್ವಜನಿಕರಿಂದ ಅವರಿಗೆ ಆಹಾರ-ನೀರು ವಿತರಣೆ ಮಾಡಲಾಯಿತು.
ಈ ವೇಳೆ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಸ್ಥಳಕ್ಕೆ ಆಗಮಿಸಿ, ಪೊಲೀಸರ ಸಹಾಯದೊಂದಿಗೆ ಪಾಸ್ ವ್ಯವಸ್ಥೆ ಮಾಡಿ, ವಾಹನದ ಮೂಲಕ ಎಂಟು ಜನರನ್ನು ನಾರಾಯಣಪೇಟ್‌ಗೆ ತೆರಳಲು ಅವಕಾಶ ಮಾಡಿ ಮಾನವೀಯತೆ ಮೆರೆದರು.
ಕರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಇಂತಹ ಹಲವಾರು ಘಟನೆಗಳು ದೇಶಾದ್ಯಂತ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂಬುದು ಸಾರ್ವಜನಿಕರ ಕೂಗಾಗಿದೆ. ಸುಮಾರು 300 ಕಿ.ಮೀ ದೂರವನ್ನು ಮಗು ಮತ್ತು ಚೀಲವನ್ನು ಹೊತ್ತುಕೊಂಡೇ ಸಾಗಿದ್ದ ಮಹಾತಾಯಿಯನ್ನು ಕಂಡು ಸ್ಥಳೀಯರ ಮನ ಕರಗಿತು. (ದಿಗ್ವಿಜಯ ನ್ಯೂಸ್)