ಬೆಳ್ಳಿ ಸಾರೋಟಿನಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ

18 mlv 2
ಮಳವಳ್ಳಿ ಪಟ್ಟಣದಲ್ಲಿ ಕನ್ನಡಾಂಬೆ ಭಾವಚಿತ್ರವನ್ನು ಬೆಳ್ಳಿ ಸಾರೋಟಿನಲ್ಲಿರಿಸಿ ಬುಧವಾರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಶಾಲಾ ವಿದ್ಯಾರ್ಥಿಗಳ ಜತೆಗೂಡಿ ಪ್ರಚಾರ ಜಾಥಾ ನಡೆಸಿದರು.
Published on

ಮಳವಳ್ಳಿ: ಡಿ.20 ರಿಂದ ಮೂರು ದಿನಗಳವರೆಗೆ ಮಂಡ್ಯ ನಗರದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕಸಾಪ ಹಾಗೂ ಸೌಹಾರ್ದ ನಾಗರೀಕ ವೇದಿಕೆ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜತೆಗೂಡಿ ಪಟ್ಟಣದಲ್ಲಿ ಬೃಹತ್ ಜಾಗೃತಿ ಜಾಥಾ ನಡೆಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪುರಸಭಾಧ್ಯಕ್ಷ ಪುಟ್ಟಸ್ವಾಮಿ ಬೆಳ್ಳಿ ಸಾರೋಟಿನಲ್ಲಿ ಇರಿಸಲಾಗಿದ್ದ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ಬಳಿಕ ತಮಟೆ, ನಗಾರಿ, ಪೂಜಾ ಕುಣಿತ, ಪೂರ್ಣಕುಂಭ ಹೊತ್ತ ಯುವತಿಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾಡಿನ ಜ್ಞಾನಪೀಠ ಸಾಹಿತಿಗಳು ಹಾಗೂ ಅಗಲಿದ ಚಿತ್ರನಟರ ಭಾವಚಿತ್ರಗಳ ಜತೆಗೆ ಕನ್ನಡ ಬಾವುಟವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ಇದೇ ವೇಳೆ ಧ್ವನಿವರ್ಧಕದಲ್ಲಿ ಮೂಡಿಬರುತ್ತಿದ್ದ ಕನ್ನಡಾಭಿಮಾನದ ಗೀತೆಗಳ ತಾಳಕ್ಕೆ ಸಂಘಟಕರು, ಪೊಲೀಸರು, ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸುವ ಮೂಲಕ ನೋಡುಗರನ್ನು ರಂಜಿಸಿದರು.

ಅನಂತರಾಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ನಿಮಿಷ ವಿದ್ಯಾರ್ಥಿಗಳು ಹಾಗೂ ಮುಖಂಡರು ಕನ್ನಡಪರ ಘೋಷಣೆಗಳನ್ನು ಕೂಗಿದರು. ತಹಸೀಲ್ದಾರ್ ಲೋಕೇಶ್ ಮಾತನಾಡಿ, ಜಾತಿ, ಧರ್ಮದ ಭೇದ ಮರೆತು ನಾವೆಲ್ಲರೂ ಕನ್ನಡಿಗರು ಎಂಬ ಭಾವನೆಯಿಂದ ಮೆರವಣಿಗಯಲ್ಲಿ ಭಾಗವಹಿಸಿರುವುದು ತುಂಬ ಖುಷಿ ತಂದಿದೆ ಎಂದ ಅವರು, ನಮ್ಮ ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಪ್ರತಿಯೊಬ್ಬರ ಮನೆ-ಮನಗಳಲ್ಲಿ ಸಂಭ್ರಮಿಸಿ ಆಚರಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಬಸವರಾಜು, ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಪುಟ್ಟಬಸವಯ್ಯ, ಕಸಪಾ ಅಧ್ಯಕ್ಷ ಚೇತನಕುಮಾರ್, ರೋಟರಿ ಸಂಸ್ಥೆಯ ಸುರೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಎಂ,ಎನ್.ಮಹೇಶ್ ಕುಮಾರ್, ಚುಂಚಯ್ಯ, ನಿಂಗರಾಜು, ಚಿಕ್ಕಮರಿಗೌಡ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net