

ಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾಪಂ ವ್ಯಾಪ್ತಿಯ ಬೆಂಬಳೂರು ಗ್ರಾಮದಲ್ಲಿ ತಾಯಿ ಶ್ರೀ ಬಾಣಂತಮ್ಮ ಮತ್ತು ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಎರಡು ದಿನಗಳ ಕಾಲ ಅದ್ದೂರಿಯಾಗಿ ನೆರವೇರಿತು.
ಸುಮಾರು 400 ವರ್ಷಗಳ ಇತಿಹಾಸವಿರುವ ಶ್ರೀ ಬಾಣಂತಮ್ಮ ಹಾಗೂ ಕುಮಾರಲಿಂಗೇಶ್ವರ ಜಾತ್ರೆ ಸಂಕ್ರಾಂತಿ ಹಬ್ಬದ ಮರುದಿನ ಜರುಗುತ್ತದೆ. ಅದರಂತೆ ಜಾತ್ರೆ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಮದಲ್ಲಿ ದವಸ, ಧಾನ್ಯ, ಹಣ್ಣು, ತರಕಾರಿ ಸಂಗ್ರಹಿಸಲಾಯಿತು. ಸಂಜೆ 5 ರಿಂದ ರಾತ್ರಿ 8ಗಂಟೆವರೆಗೆ ಶ್ರೀ ಬಾಣಂತಮ್ಮ, ಶ್ರೀ ಕುಮಾರಲಿಂಗೇಶ್ವರ ದೇವರಿಗೆ ಗಂಗಾಸ್ನಾನ, ಅಡುಗೆ ಒಲೆ ಪೂಜೆ ನಂತರ ರಾತ್ರಿ 9.30 ಗಂಟೆಯಿಂದ ಸಾಂಪ್ರದಾಯಿಕ ಮಡೆ ಪೂಜೆ ನೆರವೇರಿಸಲಾಯಿತು. ನಂತರ ಭಕ್ತರು ಮೆರವಣಿಗೆಯಲ್ಲಿ ಮಡೆಯನ್ನು ಅಡುಗೆ ಒಲೆ ಹತ್ತಿರ ತಂದು ವಿಧಿವಿಧಾನ ನಡೆಸಲಾಯಿತು.
ಮರುದಿನ ಬುಧವಾರ ಬೆಳಗ್ಗೆ 8 ಗಂಟೆಯಿಂದಲೇ ಶ್ರೀ ಬಾಣಂತಮ್ಮ ದೇವಸ್ಥಾನದಲ್ಲಿ ತಾಯಿ ಬಾಣಂತಮ್ಮ ಹಾಗೂ ಈಕೆ ಪುತ್ರ ಕುಮಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಂತರ ಬೆಳಗ್ಗೆ 10 ಗಂಟೆಗೆ ತಾಯಿ ಶ್ರೀ ಬಾಣಂತಮ್ಮ ದೇವಿ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿಟ್ಟು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕವಾಗಿ ಬಾಣಂತಮ್ಮ ಜಾತ್ರಾ ಮೈದಾನಕ್ಕೆ ತಂದು ಭಕ್ತರದ ದರ್ಶನಕ್ಕಾಗಿ ಗುಡಿಯಲ್ಲಿಡಲಾಯಿತು. ಮಧ್ಯಾಹ್ನ 12 ಗಂಟೆವರೆಗೆ ಜಾತ್ರೆ ಮಹೋತ್ಸವದ ಸಾಂಪ್ರದಾಯಿಕ ವಿಧಿವಿಧಾನಗಳು ಜರುಗಿದವು. ಬಳಿಕ ಜಾತ್ರಾ ಮೈದಾನದ ಗುಡಿಯಿಂದ ಶ್ರೀ ಬಾಣಂತಮ್ಮ ದೇವರನ್ನು ಮೂಲ ಸ್ಥಾನವಾದ ದೇವಸ್ಥಾನಕ್ಕೆ ತರಲಾಯಿತು.
ಬಳಿಕ ಮಧ್ಯಾಹ್ನ 2 ಗಂಟೆಗೆ ಬಾಣಂತಮ್ಮಳ ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ಮೈದಾನದಲ್ಲಿರುವ ಗುಡಿಗೆ ತರಲಾಯಿತು. ನಂತರ ಪೂಜಾ ವಿಧಿವಿಧಾನ ನೆರವೇರಿಸಿ ಗುಡಿಯ ಸುತ್ತ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಯಿತು.
ಭಕ್ತರು ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ಹರಕೆ ಸಲ್ಲಿಸಿದರು. ನಂತರ ಸಂಜೆ 6 ಗಂಟೆಗೆ ಶ್ರೀ ಕುಮಾರಲಿಂಗೇಶ್ವರ ಉತ್ಸವ ಮೂರ್ತಿಯನ್ನು ಮೂಲ ದೇವಸ್ಥಾನಕ್ಕೆ ತಂದು ಇಡುವ ಮೂಲಕ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಬೆಂಬಳೂರು, ಶಿವರಳ್ಳಿ, ಊರುಗುತ್ತಿ, ಮೂದರವಳ್ಳಿ ಗ್ರಾಮಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳು, ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಗ್ರಾಮದ ಶ್ರೀ ಬಾಣಂತಮ್ಮ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಹರಕೆ ಸಲ್ಲಿಸಿದರು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
ಪ್ರಥಮ ಬಾರಿ ಕ್ರೀಡಾಕೂಟ, ವಾಟರ್ ರ‌್ಯಾಫ್ಟಿಂಗ್ ವ್ಯವಸ್ಥೆ: ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ದೇವಸ್ಥಾನ ಸಮಿತಿಯಿಂದ ಜಾತ್ರೆ ಮೈದಾನದಲ್ಲಿ ಸಾರ್ವಜನಿಕರಿಗೆ ಕ್ರೀಡಾಕೂಟ ನಡೆಸಲಾಯಿತು. ಯುವಕರಿಗೆ ವಾಲಿಬಾಲ್, ಯುವತಿಯರಿಗೆ ಥ್ರೋಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟಕ್ಕೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಕ್ರೀಡಾಪಟುಗಳಿಗೆ ಶುಭ ಹಾರೈಸುವ ಮೂಲಕ ಚಾಲನೆ ನೀಡಿದರು. ಅಲ್ಲದೆ ಮೊದಲ ಬಾರಿಗೆ ಬಾಣಂತಮ್ಮ ಕೆರೆಯಲ್ಲಿ ವಾಟರ್ ರ‌್ಯಾಫ್ಟಿಂಗ್ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗಿತ್ತು.