ಬಜೆಟ್ ಪೂರ್ವಭಾವಿ ಸಭೆಗೆ ಬಹುತೇಕ ಸದಸ್ಯರು ಗೈರು

IMG-20250110-WA0224
ಅರಕಲಗೂಡಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಪ್ರದೀಪ್ ಕುಮಾರ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಇದ್ದರು.
Published on

ಅರಕಲಗೂಡು: ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪಟ್ಟಣ ಪಂಚಾಯಿತಿ ಬಜೆಟ್ ಪೂರ್ವಭಾವಿ ಸಭೆಗೆ ಬಹುತೇಕ ಸದಸ್ಯರು ಗೈರಾಗಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಕೀಲ ಶಂಕರಯ್ಯ ಮಾತನಾಡಿ, ಹಿಂದಿನ ಸಭೆಯಲ್ಲಿ ಸದಸ್ಯರು ಹಾಜರಿಲ್ಲದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಇಂದಿನ ಸಭೆಗೆ ಇನ್ನೂ ಕಡಿಮೆ ಸಂಖ್ಯೆಯಲ್ಲಿ ಸದಸ್ಯರು ಬಂದಿದ್ದಾರೆ. ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಸಮಸ್ಯೆ ಕುರಿತು ಎಷ್ಟರ ಮಟ್ಟಿನ ಕಾಳಜಿ ಇದೆ ಎಂಬುದನ್ನು ಇದು ತೋರಿಸುತ್ತದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಕ್ರೀಡಾಂಗಣ ಹೆಸರಿಗಷ್ಟೇ ಇದೆ, ಯಾವುದೇ ಮೂಲ ಸೌಕರ್ಯಗಳಿಲ್ಲ, ಯುಜಿಡಿ ಕಾಮಗಾರಿ ಸ್ಥಗಿತಗೊಂಡಿದೆ. ಬೀದಿನಾಯಿಗಳ ಹಾವಳಿಗೆ ಜನರು ರಸ್ತೆಯಲ್ಲಿ ತಿರುಗಾಡಲು ಭಯಪಡುವಂತಾಗಿದೆ, ಹಳೇ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಪಪಂ ವ್ಯಾಪ್ತಿಯಲ್ಲಿ 10 ಕೆರೆಗಳಿದ್ದು ಅಭಿವೃದ್ಧಿ ಕಂಡಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ಸೌಲಭ್ಯ ಒದಗಿಸಲು ಮುಂದಿನ ಬಜೆಟ್‌ನಲ್ಲಿ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಪಿ.ಎನ್.ರಂಗನಾಥ್ ಮಾತನಾಡಿ, ಅಧ್ಯಕ್ಷರು ಮತ್ತು ಸದಸ್ಯರು ವಾರ್ಡ್‌ಗಳಿಗೆ ಭೇಟಿ ನೀಡಿ ಲಭ್ಯವಿರುವ ಅನುದಾನದಲ್ಲಿ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಗಣಪತಿ ಕೊತ್ತಲು ಉದ್ಯಾನ ಐತಿಹಾಸಿಕ ಮಹತ್ವ ಹೊಂದಿದ್ದು ಇದರ ಅಭಿವೃದ್ಧಿಗೆ ಬಜೆಟ್ ನಲ್ಲಿ ಹಣ ಮೀಸಲಿಡಬೇಕು, ಹಳೆಯ ಬಸ್ ನಿಲ್ದಾಣದ ಜಾಗವನ್ನು ರಸ್ತೆ ಸಾರಿಗೆ ಸಂಸ್ಥೆಯಿಂದ ಪಪಂ ವಾಪಸ್ ಪಡೆದು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಆದಾಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಸದಸ್ಯ ಅನಿಕೇತನ್ ಮಾತನಾಡಿ, ತಾಲೂಕು ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಮೇಲ್ಛಾವಣಿ ಕಾಮಗಾರಿ ಪೂರ್ಣಗೊಳಿಸಲು ಮುಂದಿನ ಬಜೆಟ್‌ನಲ್ಲಿ ಹಣ ಒದಗಿಸಬೇಕು. ಪಟ್ಟಣದ ವಿವಿಧ ಬಡಾವಣೆಗಳಿಗೆ ಮಹನೀಯರ ಹೆಸರನ್ನು ನಾಮಕರಣ ಮಾಡುವಂತೆ ಸಲಹೆ ಮಾಡಿದರು.

ಪಪಂ ಮಾಜಿ ಉಪಾಧ್ಯಕ್ಷ ಎ. ಪಿ. ರಮೇಶ್ ಮಾತನಾಡಿ, ಸಭೆಯಲ್ಲಿ ನೀಡಿದ ಸಲಹೆಗಳು ಅನುಷ್ಠಾನಗೊಳ್ಳುತ್ತಿಲ್ಲ, ರಸ್ತೆ, ಬೀದಿ ದೀಪ, ಕುಡಿಯುವ ನೀರು ಮುಂತಾದ ಮೂಲಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದರು.

ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಬೀಡಾಡಿ ದನಗಳನ್ನು ಹಿಡಿದು ಗೋ ಶಾಲೆಗೆ ಬಿಡುವುದು, ಪುಡ್ ಪಾರ್ಕ್ ನಿರ್ಮಾಣ, ಪಪಂಗೆ ನೂತನ ಕಚೇರಿ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಸಲಹೆಗಳನ್ನು ಸದಸ್ಯರು ಮತ್ತು ಸಾರ್ವಜನಿಕರು ನೀಡಿದರು.

ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ, ಕಳೆದ ಎರಡೂ ಸಭೆಗಳಲ್ಲಿ ಸಾರ್ವಜನಿಕರಿಂದ ಹಲವು ಸಲಹೆಗಳು ಬಂದಿವೆ. ಈ ಕುರಿತು ಪರಿಶೀಲಿಸಿ ಮುಂದಿನ ಬಜೆಟ್‌ನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಪಂ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ ಎಂದರು.

ಸದಸ್ಯರಾದ ಹೂವಣ್ಣ, ಕೃಷ್ಣಯ್ಯ, ದಸಂಸ ಮುಖಂಡ ಸಣ್ಣಸ್ವಾಮಿ, ಉದ್ಯಮಿ ರಾಜೇಂದ್ರಕುಮಾರ್ ಜೈನ್ ಸಲಹೆಗಳನ್ನು ನೀಡಿದರು. ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net