

ಎಚ್.ಡಿ.ಕೋಟೆ: ಸಾರ್ವಜನಿಕರಿಂದ ಯಾವುದೇ ದೂರು ಬಾರದ ರೀತಿಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವುದು ವಾಹನ ಚಾಲಕರ ಜವಾಬ್ದಾರಿ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಹೇಳಿದರು.
ತಾಲೂಕಿನ ಹ್ಯಾಂಡ್‌ಪೋಸ್ಟ್ ಅರಣ್ಯ ಇಲಾಖೆ ಕಚೇರಿ ಎದುರು ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರಿಗೆ ಪಟ್ಟಣ ಪೊಲೀಸ್ ಠಾಣೆ ವತಿಯಿಂದ ಶನಿವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿ ವಾಹನಗಳನ್ನು ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ನಿಲ್ಲಿಸಬಾರದು. ಇದರಿಂದ ಅವಘಡ ಸಂಭವಿಸಲು ಕಾರಣವಾಗುತ್ತದೆ. ಇದರಿಂದ ಅಮಾಯಕ ಜನರು ಬಲಿಯಾಗುತ್ತಾರೆ. ಇತ್ತೀಚೆಗೆ ತಾಲೂಕಿನಲ್ಲಿ ಹೆಚ್ಚು ಅಪಘಾತದಲ್ಲಿ ಮೃತಪಡುವವರು ಜಾಸ್ತಿ ಆಗುತ್ತಿದ್ದು ಇದಕ್ಕೆ ರಸ್ತೆ ಸುರಕ್ಷಿತ ಕಾನೂನು ಅರಿವು ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಸಾರಿಗೆ ಸಂಸ್ಥೆ ಬಸ್‌ಗಳಿಂದ ಹೆಚ್ಚಾಗಿ ಅಪಘಾತಗಳು ಆಗುತ್ತಿದ್ದು ಇದಕ್ಕೆ ಚಾಲಕರ ಬೇಜವಾಬ್ದಾರಿ ಕಾರಣವಾಗಿದೆ. ಹಾಗಾಗಿ ಖಾಸಗಿ ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡುವಂತೆ ಸಲಹೆ ನೀಡಿದರು.
ಹ್ಯಾಂಡ್‌ಪೋಸ್ಟ್ ನ ನಾಲ್ಕು ಭಾಗಗಳಲ್ಲಿ ಒಂದು ವಾಹನವು ತೆರಳಿದ ನಂತರ ಆ ಸ್ಥಳಕ್ಕೆ ಮತ್ತೊಂದು ವಾಹನವು ಬಂದು ನಿಲ್ಲುವಂತೆ ನೋಡಿಕೊಳ್ಳಬೇಕು. ಇದರಿಂದ ಟ್ರಾಫಿಕ್ ಜಾಮ್ ಆಗುವುದನ್ನು ತಡೆಯಲು ಸಾಧ್ಯ ಆಗುತ್ತದೆ ಎಂದರು.
ಎಲ್ಲರೂ ಕಡ್ಡಾಯವಾಗಿ ವಾಹನಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಮತ್ತು ಡಿಎಲ್‌ಅನ್ನು ಹೊಂದಿರಬೇಕು. ಜತೆಗೆ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕರು ಕಡ್ಡಾಯವಾಗಿ ಯೂನಿಫಾರ್ಮ್ ಧರಿಸಿರಬೇಕು. ಇಲ್ಲದಿದ್ದರೆ ಅಂಥವರೂ ದಂಡ ತೆರಬೇಕಾಗುತ್ತದೆ ಎಂದು ಹೇಳಿದರು.
ನಿಲ್ದಾಣಗಳಲ್ಲಿ ಸಾರ್ವಜನಿಕರು ಮತ್ತು ಪಾದಚಾರಿಗಳಿಗೆ ಯಾವುದೇ ತೊಂದರೆ ಆಗದಂತೆ ವಾಹನಗಳನ್ನು ನಿಲ್ಲಿಸುವುದು ಮತ್ತು ಚಲಾಯಿಸುವುದು. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನಿಯಮಗಳ ಉಲ್ಲಂಘನೆ ಆದಲ್ಲಿ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಸಬ್‌ಇನ್‌ಸ್ಪೆಕ್ಟರ್‌ಗಳಾದ ಚಿಕ್ಕನಾಯಕ, ಸುರೇಶ ನಾಯಕ, ಪೊಲೀಸ್ ಕಾನ್‌ಸ್ಟೆಬಲ್ ಮಹದೇವಸ್ವಾಮಿ, ವಿಂಗರ್, ಆಟೋ, ಗೂಡ್ಸ್ ವಾಹನಗಳು, ಜೀಪ್‌ಗಳು, ಖಾಸಗಿ ಕಾರ್‌ಗಳ ಸಂಘಗಳ ಮುಖಂಡರು ಇದ್ದರು.