

ಶಿಗ್ಗಾಂವಿ: ಪಟ್ಟಣದ 21ನೇ ವಾರ್ಡ್ನ ಬಸವೇಶ್ವರ ನಗರದಲ್ಲಿನ ಬಹುತೇಕ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಅನೈರ್ಮಲ್ಯ ವಾತಾವರಣ ನಿರ್ವಣವಾಗಿದೆ. ಸೊಳ್ಳೆಗಳ ಕಾಟದಿಂದ ಜನರಿಗೆ ರೋಗ ಭೀತಿಯಿಂದ ಜನ ದಿನ ದೂಡುತ್ತಿದ್ದಾರೆ.
ಸ್ಥಳೀಯ ಪುರಸಭೆ ವ್ಯಾಪ್ತಿಯ ಬಸವೇಶ್ವರ ನಗರದಲ್ಲಿ ಈ ಮೊದಲು ನಿರ್ಮಾಣ ಮಾಡಿದ ಬಹುತೇಕ ಕಡೆಗಳ ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಸಮರ್ಪಕ ಚರಂಡಿ ನಿರ್ಮಾಣ ಮಾಡದಿರುವುದು. ಹಲವು ತಿಂಗಳಿನಿಂದ ಇಲ್ಲಿನ ಚರಂಡಿಗಳನ್ನು ಹೂಳೆತ್ತದಿರುವುದರಿಂದ ಗಿಡಗಳು, ಹುಲ್ಲು, ಕಸ ಕಡ್ಡಿ ಬೆಳೆದಿವೆ. ಹೀಗಾಗಿ, ಚರಂಡಿಗಳು ಹೂಳು ತುಂಬಿ ಕೊಳಚೆ ನೀರು ಸರಾಗವಾಗಿ ಮುಂದೆ ಹರಿದು ಹೋಗುತ್ತಿಲ್ಲ. ಮಳೆ ಬಂದಾಗ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ.
ಚರಂಡಿಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿರುವ ಪರಿಣಾಮ ದುರ್ನಾತದ ಜತೆಗೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ. ಸ್ಥಳೀಯರಲ್ಲಿ ವೈರಲ್ ಜ್ವರದ ಲಕ್ಷಣಗಳು ಗೋಚರಿಸಿವೆ. ಈ ವಾರ್ಡ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಪುರಸಭೆಯ ಅಧಿಕಾರಿಗಳು ಕೊಳಚೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕಾಗಿದೆ. ಸೊಳ್ಳೆಗಳ ಹಾವಳಿ ತಡೆಗೆ ಫಾಗಿಂಗ್ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಚರಂಡಿಯಲ್ಲಿ ನೀರು ಸರಿಯಾಗಿ ಹರಿಯುತ್ತಿಲ್ಲ. ಮನೆಗಳಿಂದ ಚರಂಡಿಗೆ ಬರುವ ನೀರು ಅಲ್ಲಲ್ಲಿ ಶೇಖರಣೆಗೊಂಡು ಸೊಳ್ಳೆಗಳು ಬೆಳೆಯುತ್ತಿವೆ. ದುರ್ನಾತದಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಇಲ್ಲಿನ ಕೆಲವು ಜನರಲ್ಲಿ ಜ್ವರ ಕಾಣಿಸಿಕೊಂಡಿದೆ. ಸಂಬಂಧಪಟ್ಟವರು ಚರಂಡಿ ನೀರು ಸರಾಗವಾಗಿ ಹರಿಯುವಂತೆ ತಕ್ಷಣ ಮಾಡಬೇಕು. | ಎಸ್.ಬಿ. ಕುಂದೂರ, ಸ್ಥಳೀಯ ನಿವಾಸಿ