

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜಗತ್ತಿಗೆ ಶ್ರೀಕೃಷ್ಣ ಸಾರಿದ ಸಂದೇಶಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ.ಸುವರ್ಣ ಹೇಳಿದರು.
ಲಾಯಿಲ ಗ್ರಾಮದ ಪಡ್ಲಾಡಿ ಶಾಲಾ ವಠಾರದಲ್ಲಿ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಡ್ಲಾಡಿ ಲಾಲ ಆಶ್ರಯದಲ್ಲಿ ಆಯೋಜಿಸಲಾದ 34ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
13 ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ವಿಶೇಷ ಸಾಧನೆಗೈದ ಶ್ರದ್ಧಾ ಶೆಟ್ಟಿ ಎಣಿಂಜೆ, ಹಿರಿಯ ನಾಟಿ ವೈದ್ಯೆ ಗುಲಾಬಿ ಸಿದ್ದು ದೇವಾಡಿಗ ಅವರನ್ನು ಗೌರವಿಸಲಾಯಿತು. ವಿನಯ್ ಎಂ.ಎಸ್. ಅಧ್ಯಕ್ಷತೆ ವಹಿಸಿದ್ದರು. ಸ.ಹಿ.ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ, ಅಂಬೇಡ್ಕರ್ ಭವನ ಉಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಎಲ್. ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ವರುಣ್ ಕಾರ್ಯಕ್ರಮ ನಿರೂಪಿಸಿದರು. ದಿನಕರ್ ದೇವೊಟ್ಟು, ರಾಜೇಶ್ ಅಂಕಾಜೆ, ಪವನ್, ರವಿಚಂದ್ರ ನಾಡೆಂಜ, ಅನಿಲ್, ಸಂತೋಷ್ ಹಿಮರಡ್ಡ ಸಹಕರಿಸಿದರು.
ಈ ಬಾರಿ ಚೆನ್ನೆಮಣೆ ಆಟ ಗಮನ ಸೆಳೆಯಿತು. ಬೆಳಗ್ಗೆ ಆನಂದ ಪೂಜಾರಿ ನಿನ್ನಿಕಲ್ಲು ಕಾರ್ಯಕ್ರಮ ಉದ್ಘಾಟಿಸಿದರು. ಹಾಲು ಉತ್ಪಾದಕರ ಸಂಘ ಪಡ್ಲಾಡಿ ಅಧ್ಯಕ್ಷ ವಿಶ್ವೇಶ್ವರಯ್ಯ ಭಟ್, ಉತ್ಸಾಹಿ ಯುವಕ ಮಂಡಲ ಅಧ್ಯಕ್ಷ ಹರ್ಷಿತ್ ಎಲ್., ರೇಷ್ಮಾ ರೋಸ್ಲಿನ್ ಮುಖ್ಯ ಅತಿಥಿಗಳಾಗಿದ್ದರು.