

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಸಂಭ್ರಮದ ಮೊಸರು ಕುಡಿಕೆ ಉತ್ಸವ ನಡೆಯಿತು.
ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ವತಿಯಿಂದ ಕದ್ರಿಯಲ್ಲಿ ಮೊಸರು ಕುಡಿಕೆ ನಡೆಯಿತು. ಶ್ರೀ ಗೋಪಾಲಕೃಷ್ಣ ಮಠದಿಂದ ಅಲಂಕೃತ ಮಂಟಪದಲ್ಲಿ ಶ್ರೀಕೃಷ್ಣನ ವಿಗ್ರಹವು ಭಜನೆ, ವಿದ್ಯುದ್ದೀಪಾಲಂಕೃತವಾದ ಸ್ತಬ್ಧಚಿತ್ರಗಳು, ಚೆಂಡೆ, ಹುಲಿ ಹಾಗೂ ಇತರ ವೇಷ ಭೂಷಣ ಮೆರುಗಿನೊಂದಿಗೆ ಹೊರಟ ಶೋಭಾಯಾತ್ರೆ ಕದ್ರಿ ಕಂಬಳ ರಸ್ತೆ, ಸಿಟಿ ಹಾಸ್ಪಿಟಲ್ ತಿರುವು ರಸ್ತೆಯಾಗಿ ಮಲ್ಲಿಕಟ್ಟೆಯಲ್ಲಿರುವ ಶ್ರೀ ಮಂಜುನಾಥ ಸ್ವಾಮಿಯ ಮಹಾದ್ವಾರವನ್ನು ಹಾದು ಕದ್ರಿ ದೇವಳದ ರಾಜಾಂಗಣ ತಲುಪಿತು. ಅಲ್ಲಲ್ಲಿ ಅಟ್ಟಳಿಗೆಗಳಲ್ಲಿ ಕಟ್ಟಿದ್ದ ಕುಡಿಕೆೆಗಳನ್ನು ಯುವಕರ ತಂಡಗಳು ಪಿರಮಿಡ್ ನಿರ್ಮಿಸಿ ಒಡೆದು ಸಂಭ್ರಮಿಸಿದರು.
ಉರ್ವದಲ್ಲಿ ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ ಮೊಸರು ಕುಡಿಕೆ ಉತ್ಸವದಲ್ಲಿ ಮೆರವಣಿಗೆ ಬಳಿಕ ಮೊಸರು ಕುಡಿಕೆ ಒಡೆಯಲಾಯಿತು. ಅತ್ತಾವರದಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಜಯಂತ್ಯುತ್ಸವ ಸಮಿತಿ ವತಿಯಿಂದ ರಸ್ತೆಯುದ್ದಕ್ಕೂ ಕಟ್ಟಿದ್ದ ನೂರಾರು ಮೊಸರು ತುಂಬಿದ್ದ ಕುಡಿಕೆಗಳನ್ನು ಒಡೆಯಲಾಯಿತು. ಸಾವಿರಾರು ಮಂದಿ ಈ ದೃಶ್ಯಗಳನ್ನು ಕಣ್ತುಂಬಿಕೊಂಡರು.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೊಸರು ಕುಡಿಕೆ ಮೆರವಣಿಗೆ ಹೊರಟು ಕಾವೂರು ಜಂಕ್ಷನ್‌ನಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಸ್ತಬ್ದ ಚಿತ್ರ, ವಿವಿಧ ವೇಷಭೂಷಣ ಮೆರುಗು ತಂದಿತ್ತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮನ ರಂಜಿಸಿತು. ರಸ್ತೆಯಲ್ಲಿ ಕಟ್ಟಿದ್ದ ಮೊಸರು ಕುಡಿಕೆಯನ್ನು ಒಡೆದು ಸಂಭ್ರಮಿಸಿದರು.
ಪಂಜಿಮೊಗರು ಉರುಂದಾಡಿ ನವನೀತ್ ಫ್ರೆಂಡ್ಸ್ ಸರ್ಕಲ್ ವತಿಯಿಂದ 23 ನೇ ವರ್ಷದ ಮೊಸರು ಕುಡಿಕೆ ನಡೆಯಿತು. ಉರುಂದಾಡಿ ಗುಡ್ಡೆಯಿಂದ ಪಂಜಿಮೊಗರು ಜಂಕ್ಷನ್ ತನಕ ಮೊಸರು ಕುಡಿಕೆ ಮೆರವಣಿಗೆ ನಡೆಯಿತು. ಕುಲಶೇಖರ, ಉರ್ವ ಮಾರ್ಕೆಟ್‌ನಲ್ಲಿ ಮೊಸರು ಕುಡಿಕೆ ಉತ್ಸವ ವೈಭವದಿಂದ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.