

ಹುಬ್ಬಳ್ಳಿ: ನಿಂತು ನೋಡುವವರಿಗೆ ಇದೇನು ಮಹಾ ಎನ್ನುವಂತಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆಗಾಗಿ ಒಂದೊಂದೇ ತಂಡಗಳು ಮೈದಾನಕ್ಕೆ ಇಳಿದು ಮೈಕೆಸರು ಮಾಡಿಕೊಂಡಾಗಲೇ ಗೊತ್ತಾಗಿತ್ತು ಅಬ್ಬಾ ಇದು ಎಷ್ಟೊಂದು ಕಷ್ಟ ಎಂದು.
ಆದರೂ, ಯುವಕರು ಮತ್ತೆಮತ್ತೆ ಮೈಕೊಡವಿಕೊಂಡು ಎದ್ದು ತಮ್ಮ ದೃಷ್ಟಿ ಗಡಿಗೆಯತ್ತ ನೆಟ್ಟು ತಲುಪಲು ಪ್ರಯತ್ನಿಸುತ್ತಿದ್ದ ಕ್ಷಣಗಳು ರೋಮಾಂಚನಕಾರಿಯಾಗಿದ್ದವು.
ಇಲ್ಲಿಯ ಅಕ್ಷಯ ಪಾರ್ಕ್ ಎದುರಿನ ಸಂತೆ ಮೈದಾನದಲ್ಲಿ ಚೈತನ್ಯ ನಗರ ನಿವಾಸಿಗಳ ಸಂ ಹಾಗೂ ಶ್ರೀ ಸರಸ್ವತಿ ಮಹಿಳಾ ಮಂಡಳದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಏರ್ಪಡಿಸಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಜನಮನ ಸೂರೆಗೊಂಡಿತು.
ಸ್ಪರ್ಧೆಗಾಗಿ ಕಪ್ಪು ಹುಡಿ ಮಣ್ಣು ಹಾಕಿ ನೀರು ಹಾಯಿಸಿ ಸಜ್ಜುಗೊಳಿಸಲಾಗಿತ್ತು. ಅದರ ಮೇಲೆ ಸುಮಾರು 20ರಿಂದ 25 ಅಡಿ ಎತ್ತರದಲ್ಲಿ ಮೊಸರು ಗಡಿಗೆ ಕಟ್ಟಲಾಗಿತ್ತು. ಎಲ್ಲರ ದೃಷ್ಟಿ ಗಡಿಗೆ ಮೇಲಿತ್ತು. ಹನ್ನೊಂದು ಜನರ ತಂಡಗಳು ಒಂದೊಂದಾಗಿ ಸಾಹಸ ಪ್ರದರ್ಶನಕ್ಕೆ ಇಳಿಯುತ್ತಿದ್ದಂತೆ ಸುತ್ತಲೂ ಸೇರಿದ್ದವರು ಶಿಳ್ಳೆ, ಕೇಕೆ ಹಾಕಿ ಪ್ರೋತ್ಸಾಹಿಸಿದರು.
ಹನ್ನೊಂದು ಜನರಲ್ಲಿ ನಾಲ್ಕೈದು ಜನ ಕೆಳಗೆ ಬಳ್ಳಿ ಕಟ್ಟಿಕೊಂಡು ಗಟ್ಟಿಯಾಗಿ ನಿಂತರೆ ಅವರ ಮೇಲೆ ಮೂರು ಜನ ನಿಂತರು. ಗಡಿಗೆ ಕೈಗೆ ತಾಗಲಿಲ್ಲ. ಮತ್ತಿಬ್ಬರು ಅವರ ಮೇಲೆ ನಿಂತರೂ ತಾಗದಿದ್ದಾಗ ಅವರ ಮೇಲೆ ಮತ್ತೊಬ್ಬ ನಿಲ್ಲಲು ಪ್ರಯತ್ನಿಸುತ್ತಿದ್ದಾಗಲೇ ಸುತ್ತಲೂ ನಿಂತವರು ಜೋರಾಗಿ ನೀರು ಹೊಡೆಯುತ್ತಿದ್ದರು. ಆಗ ಎಲ್ಲರೂ ಜಾರಿ ಕೆಸರಲ್ಲಿ ಬೀಳುವುದು ಸಾಮಾನ್ಯವಾಗಿತ್ತು.
ಹೀಗೆ ಹಲವಾರು ಅಡೆತಡೆಗಳ ಮಧ್ಯೆಯೇ 15ಕ್ಕೂ ಹೆಚ್ಚು ತಂಡಗಳು ತಮ್ಮ ಸಾಹಸ, ಶೌರ್ಯ ಪ್ರದಶಿರ್ಸಿ ಗುರಿ ತಲುಪುವ ಪ್ರಯತ್ನ ಮಾಡಿದರು.
ಇದರಲ್ಲಿ ಜಯ ಸಾಧಿಸಿದ ತಂಡದವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಮೊದಲ ಪ್ರಶಸ್ತಿಯನ್ನು ಗಾರ್ಡನ್ ಬಾಯ್ಸ್ ತಂಡ ಹಾಗೂ ಎರಡನೇ ಪ್ರಶಸ್ತಿಯನ್ನು ನಂದಾ ಎಂಟರ್ಪೆಸಿಸ್ ತಂಡದವರು ಪಡೆದುಕೊಂಡರು.
ಸಂಘಟಕರಾದ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಕೃಷ್ಣ ಗಂಡಗಾಳೇಕರ, ಡಾ. ಮಹೇಶ ನಾಲವಾಡ, ಸುಭಾಸಸಿಂಗ್ ಜಮಾದಾರ, ಇತರರು ನಿರ್ವಹಿಸಿದರು.
ಅದಮ್ಯ ಚೇತನದ ಗೋವಿಂದ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಇತರರು ಅತಿಥಿಯಾಗಿದ್ದರು.