ಸ್ವಿಗ್ಗಿಯಿಂದ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ: ಫುಡ್ ಡೆಲಿವರಿ ಅವಧಿ ಹೆಚ್ಚಿಸಿಕೊಳ್ಳಲು ಕಮಿಷನರ್ ಭಾಸ್ಕರ್ ರಾವ್ ಸೂಚನೆ

Swiggy
Published on

ಬೆಂಗಳೂರು: ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ ಫುಡ್ 30 ನಿಮಿಷದೊಳಗೆ ತಲುಪಿಸಲು ವಿಧಿಸಿಕೊಂಡಿರುವ ಗಡುವನ್ನು 40 ನಿಮಿಷಕ್ಕೆ ಹೆಚ್ಚಿಸಿಕೊಳ್ಳುವಂತೆ ಆನ್​ಲೈನ್ ಫುಡ್ ಡೆಲಿವರಿ ಕಂಪನಿಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

ನಿರ್ದಿಷ್ಟ ಸಮಯದೊಳಗೆ ಆಹಾರ ತಲುಪಿಸಬೇಕು ಎಂಬ ಒತ್ತಡದಲ್ಲಿ ಡೆಲಿವರಿ ಬಾಯ್ಸ್ ಪ್ರಾಣವನ್ನೇ ಪಣಕ್ಕಿಟ್ಟು ದ್ವಿಚಕ್ರ ವಾಹನ ಚಲಾಯಿಸುತ್ತಾರೆ. ತರಾತುರಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಾರೆ. ಹೀಗಾಗಿ ಇವರೆಲ್ಲರೂ ಅನಗತ್ಯವಾಗಿ ತೊಂದರೆಯಲ್ಲಿ ಸಿಲಕುತ್ತಾರೆ. ಇಂಥ ಸಂದಿಗ್ಧತೆ ಅನುಭವಿಸುವ ಇವರಿಂದ ಆಹಾರ ತೆಗೆದುಕೊಳ್ಳಲು ಮನಸ್ಸು ಬರುತ್ತದೆಯೇ ಎಂದು ಸರಣಿ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.

ಫುಡ್ ಡೆಲಿವರಿ ಬಾಯ್ಸ್ ಸಂಚಾರ ನಿಯಮ ಉಲ್ಲಂಘಿಸುವುದು ಸಾಮಾನ್ಯವಾಗುತ್ತಿದೆ. ಅವರು ಅತಿವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಾರೆ. ಸಿಗ್ನಲ್ ಜಂಪ್ ಮಾಡುತ್ತಾರೆ. ಇದರಿಂದ ಬೇರೆ ವಾಹನ ಸವಾರರಿಗೂ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರಿಂದ ಆರೋಪಗಳು ಬಂದಿವೆ ಎಂದು ಹೇಳಿದ್ದಾರೆ.

ದೂರು ಕೊಡಿ ಎಂದ ಸ್ವಿಗ್ಗಿ: ಕಮಿಷನರ್ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿ ಕಂಪನಿ, ನಮ್ಮ ಡೆಲಿವರಿ ಸಿಬ್ಬಂದಿ ಸಂಚಾರ ನಿಯಮ ಉಲ್ಲಂಘಿಸುವುದಿಲ್ಲ. ಹಾಗೇನಾದರೂ ಅವರು ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಸಹಾಯವಾಣಿ ಕರೆ ಮಾಡಿ ದೂರು ಕೊಡಬಹುದು ಎಂದು ಸೂಚಿಸಿದ್ದಾರೆ. ಸ್ವಿಗ್ಗಿಯ ಈ ಪ್ರತಿಕ್ರಿಯೆಗೆ ಭಾಸ್ಕರ್ ರಾವ್ ಗರಂ ಆಗಿದ್ದಾರೆ.

ಅಪಘಾತಕ್ಕೀಡಾದಲ್ಲಿ ಕಂಪನಿಯೇ ಹೊಣೆ

ನಿಮ್ಮ ಡೆಲಿವರಿ ಸಿಬ್ಬಂದಿಯೇ ಅತಿಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಆದಾಗ್ಯೂ ಸಂಚಾರ ನಿಯಮ ಪಾಲನೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದೀರಿ. ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಾಗ ಡೆಲಿವರಿ ಬಾಯ್ಗಳು ನೀವು ಶಿಕ್ಷೆ ನೀಡುತ್ತೀರಿ ಎಂಬ ಕಾರಣಕ್ಕೆ ಬಿಟ್ಟುಬಿಡುವಂತೆ ಟ್ರಾಫಿಕ್ ಪೊಲೀಸರ ಬಳಿ ಅಂಗಲಾಚುತ್ತಾರೆ. ಇನ್ನು ಮುಂದೆ ಸ್ವಿಗ್ಗಿ ಡೆಲಿವರಿ ಸಿಬ್ಬಂದಿ ಅಪಘಾತಕ್ಕೆ ಸಿಲುಕಿ ಏನಾದರೂ ಆದಲ್ಲಿ ಕಂಪನಿಯ ಆಡಳಿತ ಮಂಡಳಿಯೇ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net