ಮೈಸೂರಿನಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮಳೆ

Rain in mysore
Published on

ಮೈಸೂರು: ರಾಜ್ಯದ ವಿವಿಧೆಡೆ ಮಳೆ ಆರ್ಭಟಿಸುತ್ತಿದ್ದು, ಜಿಲ್ಲೆಯಲ್ಲೂ ಸಹ ಅಕ್ಟೋಬರ್ ತಿಂಗಳಿನಲ್ಲಿ ಭಾರಿ ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಅ.1 ರಿಂದ 25ರವರೆಗೆ 129.6 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, ಈ ಅವಧಿಯಲ್ಲಿ 129.6 ಮಿ.ಮೀ. ಮಳೆ ಸುರಿದ್ದು, ಶೇ.8 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಭಾರಿ ಮಳೆಯಾಗಿದ್ದು, ಕೆಲವು ತಾಲೂಕುಗಳಲ್ಲಿ ವಾಡಿಕೆ ಗಿಂತ ಕಡಿಮೆ ಮಳೆ ಸುರಿದಿದೆ. ತಿ.ನರಸೀಪುರ ತಾಲೂಕಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ.

ತಾಲೂಕುವಾರು ವಿವರ: ತಿ.ನರಸೀಪುರ ತಾಲೂಕಿನಲ್ಲಿ ಅತಿಹೆಚ್ಚು, ಹುಣಸೂರು ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ. ತಿ.ನರಸೀಪುರ ತಾಲೂಕಿನಲ್ಲಿ 128.3 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ, 192.2 ಮಿ.ಮೀ. ಮಳೆಯಾಗಿದ್ದು, ಶೇ.50 ರಷ್ಟು ಹೆಚ್ಚುವರಿ ಮಳೆಯಾಗಿದೆ. ಅದೇ ರೀತಿ ಎಚ್.ಡಿ. ಕೋಟೆ ತಾಲೂಕಿನಲ್ಲಿ 106.1 (ವಾಡಿಕೆ ಮಳೆ-106.0) ಮಳೆಯಾಗಿದ್ದು, ವಾಡಿಕೆ ಮಳೆ ಹಾಗೂ ವಾಸ್ತವಿಕ ಮಳೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಹುಣಸೂರು ತಾಲೂಕಿನಲ್ಲಿ 111.1 (134.4) ಮಿ.ಮೀ. ಮಳೆಯಾಗಿದ್ದು, ಶೇ.17 ರಷ್ಟು ಮಳೆಯ ಕೊರತೆಯಾಗಿದೆ.

ಕೆ.ಆರ್. ನಗರ ತಾಲೂಕಿನಲ್ಲಿ 146.3 (134.4) ಮಿ.ಮೀ. ಮಳೆಯಾಗಿದ್ದು, ಶೇ.9 ರಷ್ಟು ಹೆಚ್ಚುವರಿ ಮಳೆಯಾಗಿದೆ. ಮೈಸೂರು ತಾಲೂಕಿನಲ್ಲಿ 115.2 (129.0) ಮಿ.ಮೀ. ಮಳೆಯಾಗಿದ್ದು, ಶೇ.11 ರಷ್ಟು ಮಳೆ ಕೊರತೆ ಕಂಡು ಬಂದಿದೆ. ನಂಜನಗೂಡು ತಾಲೂಕಿನಲ್ಲಿ 159.5 (115.3) ಮಿ.ಮೀ. ಮಳೆಯಾಗಿದ್ದು, ಶೇ.38 ರಷ್ಟು ಅಧಿಕ ಮಳೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 117.3 (118.0) ಮಿ.ಮೀ. ಮಳೆಯಾಗಿದ್ದು, ಶೇ.1 ರಷ್ಟು ಮಳೆಯ ಕೊರತೆ ಕಂಡು ಬಂದಿದೆ. ಸರಗೂರು ತಾಲೂಕಿನಲ್ಲಿ 106.4 (112.6) ಮಿ.ಮೀ. ಮಳೆಯಾಗಿದ್ದು, ಶೇ.6 ರಷ್ಟು ಕಡಿಮೆ ಮಳೆಯಾಗಿದೆ. ಸಾಲಿಗ್ರಾಮ ತಾಲೂಕಿನಲ್ಲಿ 140.7 (122.9) ಮಿ.ಮೀ. ಮಳೆಯಾಗಿದ್ದು, ಶೇ.14 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಈ ಬಾರಿಯ ಮುಂಗಾರು (1 ಜೂನ್‌ನಿಂದ 30 ಸೆಪ್ಟೆಂಬರ್) ಜಿಲ್ಲೆಯಲ್ಲಿ ಉತ್ತಮವಾಗಿದ್ದು, ಶೇ.14 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ 419 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ, 475 ಮಿ.ಮೀ. ಮಳೆ ಸುರಿಯಿತು

ಈ ಬಾರಿಯ ಮುಂಗಾರು ಬಹುತೇಕ ಎಲ್ಲ ತಾಲೂಕುಗಳಲ್ಲಿ ಉತ್ತಮವಾಗಿ ಸುರಿದ್ದು, ಕೆ.ಆರ್. ನಗರ ತಾಲೂಕಿನಲ್ಲಿ ಕೊರತೆ ಕಂಡು ಬಂದರೆ, ಮೈಸೂರು ಮತ್ತು ತಿ.ನರಸೀಪುರ ತಾಲೂಕಿನಲ್ಲಿ ಕಡಿಮೆ ಮಳೆಯಾಯಿತು. ಮುಂಗಾರು ಸಂದರ್ಭ ಕಡಿಮೆ ಮಳೆ ಕಂಡು ಬಂದ ತಿ.ನರಸೀಪುರ ತಾಲೂಕಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಸುರಿದಿದೆ.

ಎಚ್.ಡಿ. ಕೋಟೆ ತಾಲೂಕಿನಲ್ಲಿ 672 (ವಾಡಿಕೆ ಮಳೆ-409) ಮಿ.ಮೀ., ಹುಣಸೂರು ತಾಲೂಕಿನಲ್ಲಿ 369 (426) ಮಿ.ಮೀ., ಕೆ.ಅರ್. ನಗರ ತಾಲೂಕಿನಲ್ಲಿ 317 (321) ಮಿ.ಮೀ., ಮೈಸೂರು ತಾಲೂಕಿನಲ್ಲಿ 356 (354), ನಂಜನಗೂಡು ತಾಲೂಕಿನಲ್ಲಿ 397 (322), ಪಿರಿಯಾಪಟ್ಟಣ ತಾಲೂಕಿನಲ್ಲಿ 572 (437) ಮಿ.ಮೀ., ತಿ.ನರಸೀಪುರ ತಾಲೂಕಿನಲ್ಲಿ 354 (338) ಮಿ.ಮೀ., ಸರಗೂರು ತಾಲೂಕಿನಲ್ಲಿ 580 (492) ಮಿ.ಮೀ., ಸಾಲಿಗ್ರಾಮ ತಾಲೂಕಿನಲ್ಲಿ 455 (288) ಮಿ.ಮೀ. ಮಳೆ ಸುರಿದಿತ್ತು.

ಒಳ ಹರಿವು ಹೆಚ್ಚಳ: ಕಬಿನಿ ಜಲಾಶಯಕ್ಕೆ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿದು ಬರುತಿತ್ತು. ಆದರೆ, ಈ ಬಾರಿ ಅಕ್ಟೋಬರ್‌ನಲ್ಲಿ ಮಳೆಯ ಆರ್ಭಟದಿಂದ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ ಶುಕ್ರವಾರ 1603 ಕ್ಯೂಸೆಕ್ ನೀರು ಹರಿದು ಬಂದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 263 ಕ್ಯೂಸೆಕ್ ನೀರು ಮಾತ್ರ ಹರಿದು ಬಂದಿತ್ತು. ಜಲಾಶಯದಿಂದ 750 ಕ್ಯೂಸೆಕ್ ನೀರು ಹರಿಯ ಬಿಡಲಾಗುತ್ತಿದೆ. ಗರಿಷ್ಠ 2284 ಅಡಿಗಳಷ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2283.79 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಮತ್ತೊಮ್ಮೆ ಭರ್ತಿಯತ್ತ ಮುಖ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ನೀರು ಸಾಕಷ್ಟು ಬರಿದಾಗಿ 2273.53 ಅಡಿಗಳಷ್ಟು ಮಾತ್ರ ನೀರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net