

ಶಿರಸಿ ತಾಲೂಕು ದಾಸನಕೊಪ್ಪ ಭಾಗದಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ ನಿರತರಾಗಿರುವುದು.
ಶಿರಸಿ: ಕಳೆದ ಹದಿನೈದು ದಿನಗಳ ಮಳೆಯಿಂದಾಗಿ ತಾಲೂಕಿನ ಭತ್ತದ ಕ್ಷೇತ್ರಕ್ಕೆ ಅಗತ್ಯ ಪ್ರಮಾಣದ ನೀರು ದೊರೆತಿದ್ದು, ಕೃಷಿ ಕಾರ್ಯಗಳು ಚುರುಕುಗೊಂಡಿವೆ. ಬನವಾಸಿ ಮತ್ತು ದಾಸನಕೊಪ್ಪ ಭಾಗದಲ್ಲಿ ರೈತರು ಭತ್ತದ ನಾಟಿ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.
ತಾಲೂಕಿನಲ್ಲಿ 770 ಹೆಕ್ಟೇರ್ ಬಿತ್ತನೆ, 6328 ಹೆಕ್ಟೇರ್ ಭತ್ತ ನಾಟಿ ಪ್ರದೇಶವಿದೆ. 705 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಕಾರ್ಯ ನಡೆದಿದೆ. ಈಗ ನಾಟಿ ಕಾರ್ಯ ಪ್ರಗತಿಯಲ್ಲಿದೆ. ತಾಲೂಕಿನಲ್ಲಿ ಯೂರಿಯಾ, ಡಿಎಪಿ, ಪೊಟಾಶ್ , ಕಾಂಪ್ಲೆಕ್ಸ್ 650 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದ್ದು, ಹೈಬ್ರಿಡ್ ಭತ್ತ 25 ಕ್ವಿಂಟಾಲ್, ಅಭಿಲಾಷ 116 ಕ್ವಿಂಟಾಲ್, ಜಯಾ 3.5 ಕ್ವಿಂಟಾಲ್, ಇಂಟಾನ್ 8.5 ಕ್ವಿಂಟಾಲ್, ಎಂಟಿಯು 1010- 28 ಕ್ವಿಂಟಾಲ್, ಎಂಟಿಯು 1001- 130 ಕ್ವಿಂಟಾಲ್, ಆರ್.ಎನ್.ಆರ್ 106 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ 21 ಕ್ವಿಂಟಾಲ್ ಮುಸುಕಿನ ಜೋಳ ಸೆರಿದಂತೆ ಒಟ್ಟೂ 261 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. 467 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆಯಾಗಿದೆ.
ಶಿರಸಿ ತಾಲೂಕಿನಲ್ಲಿ ಜುಲೈ ತಿಂಗಳಿನಲ್ಲಿ 949.0 ಮಿ.ಮೀ ವಾಡಿಕೆ ಮಳೆಯಿದ್ದು, ಈ ವರ್ಷದ ಜು. 21ರವರೆಗೆ 2170.8 ಮಿ.ಮೀ ಮಳೆಯಾಗಿದೆ. ಇದು ಪ್ರತಿ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.
ಈ ವರ್ಷ ಜುಲೈ ತಿಂಗಳಿನಲ್ಲಿ ಒಮ್ಮೆಲೇ ಮಳೆಯ ಅಬ್ಬರ ಜೋರಾಗಿ, ವಾಡಿಕೆಗಿಂತ ಜಾಸ್ತಿ ಸುರಿದಿದೆ. ಕಳೆದ 10 ದಿನಗಳಿಂದ ಮಳೆಯ ಕಾರಣದಿಂದಾಗಿ ಭತ್ತದ ಗದ್ದೆಗಳಿಗೆ ರೈತರು ತೆರಳಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗಿತ್ತಾದರೂ ಈಗ ಅಬ್ಬರದ ಮಳೆ ಕಡಿಮೆಗೊಂಡಿದೆ. ಹೀಗಾಗಿ ಎಲ್ಲ ಕಡೆಗಳಲ್ಲಿ ರೈತರು ಒಮ್ಮೆಲೇ ಹೊಲಗಳಿಗಿಳಿದು ಗದ್ದೆ ಹದಗೊಳಿಸುವಿಕೆ, ನಾಟಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಮತ್ತೆ ಮಳೆ ಜೋರಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಾಟಿ ಕಾರ್ಯ ತ್ವರಿತವಾಗಿ ನಡೆಸಲು ಯಂತ್ರೋಪಕರಣಗಳಿಗೆ ಜಾಸ್ತಿ ಒತ್ತು ನೀಡಿದ್ದಾರೆ.
ಕಳೆದ ವರ್ಷ ತಾಲೂಕಿನಲ್ಲಿ ರೈತರು ಕೈ ಸುಟ್ಟುಕೊಂಡಿದ್ದೇ ಅಧಿಕವಾಗಿತ್ತು. ಆರಂಭಿಕವಾಗಿ ಮಳೆಯಾಗಿದ್ದರೂ ಆ ಬಳಿಕ ಮಳೆಯ ಪ್ರಮಾಣ ಕ್ಷೀಣಿಸಿ, ಕಳೆದ ವರ್ಷ ಈ ದಿನಗಳಲ್ಲಿ ನೆಟ್ಟ ಭತ್ತದ ಗಿಡಗಳಿಗೂ ನೀರಿಲ್ಲದೇ ಒಣಗತೊಡಗಿತ್ತು. ಆದರೆ, ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಬನವಾಸಿ ಭಾಗದಲ್ಲಿ ವರದಾ ನದಿ ನೀರಿನ ಪ್ರವಾಹ ಭತ್ತದ ಗದ್ದೆಗಳನ್ನು ಮುಳುಗಿಸಿದೆ. ಇಲ್ಲಿಯ ರೈತರು ವರದಾ ನದಿ ನೀರು ಇಳಿಮುಖವಾಗುವುದನ್ನು ಈಗ ಕಾಯತೊಡಗಿದ್ದಾರೆ.
ಕೋಟ್:
ಈ ವರ್ಷದ ಉತ್ತಮ ಮಳೆ ಭತ್ತ ನಾಟಿಗೆ ಸೂಕ್ತ ವಾತಾವರಣ ಒದಗಿಸಿದೆ. ಮಳೆ ಮತ್ತೆ ಜೋರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಾಟಿ ಕಾರ್ಯವನ್ನು ತ್ವರಿತವಾಗಿ ನಡೆಸುತ್ತಿದ್ದೇವೆ.
| ಸುರೇಶ ಗೌಡ ದಾಸನಕೊಪ್ಪ, ಭತ್ತದ ಬೆಳೆಗಾರ
-------------