ಬೀಡು ಬಿಟ್ಟ 60ಕ್ಕೂ ಹೆಚ್ಚು ಕಾಡಾನೆಗಳು

MDR Elephant
ನಿಡಘಟ್ಟದ ತೋಟವೊಂದರಲ್ಲಿ ಸೋಮವಾರ ಬೀಡು ಬಿಟ್ಟಿರುವ ಕಾಡಾನೆಗಳು.
Published on

ಬೇಲೂರು: ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು, ದಿನದಿಂದ ದಿನಕ್ಕೆ ಆನೆಗಳ ಉಪಟಳ ಹೇಳ ತೀರದಾಗಿದೆ. ಈಗಾಗಲೇ ತಾಲೂಕೊಂದರಲ್ಲೇ ಸಾವಿರಾರು ಎಕರೆಯಲ್ಲಿ ಬೆಳೆ ನಾಶ ಪಡಿಸಿರುವ ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ಮನೆ, ರಸ್ತೆ, ಜಮೀನುಗಳಲ್ಲಿ ಮನುಷ್ಯರನ್ನೂ ಕಂಡರೆ ಬಿಡುತ್ತಿಲ್ಲ. ಇದರಿಂದ ಜನರು ಭಯಭೀತರಾದ್ದಾರೆ.

ಹಗಲು ರಾತ್ರಿ ಎನ್ನದೆ ಕಾಡಾನೆಗಳು ಗುಂಪಾಗಿ ಮತ್ತು ಒಂಟಿಯಾಗಿ ವಾಸದ ಮನೆಗಳ ಆಸುಪಾಸಿನಲ್ಲೇ ಆಹಾರಕ್ಕಾಗಿ ಓಡಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ. ಜತೆಗೆ ತೋಟಗಳಲ್ಲಿ ಬೆಳೆದ ಕಾಫಿ, ಅಡಕೆ, ಬಾಳೆ ಸೇರಿದಂತೆ ಇತರ ಬೆಳೆಗಳನ್ನೂ ಬಿಡದೆ ನಾಶ ಪಡಿಸುತ್ತಿವೆ. ಜತೆಗೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಎರಡು ಮೂರು ಗುಂಪುಗಳಾಗಿ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿವೆ. ಇವುಗಳ ಹಿಂಡಿನಿಂದ ಬೇರಾದ ಒಂಟಿ ಆನೆಗಳು ಮನುಷ್ಯರನ್ನು ಕಂಡರೆ ಸಾಕು ಅಟ್ಟಾಡಿಸುತ್ತಿವೆ.

ಸರ್ಕಾರ ಅರಣ್ಯ ಇಲಾಖೆ ದಸರಾ ಆನೆಗಳನ್ನು ಕರೆ ತಂದು ಅಧಿಕಾರಿಗಳ ಮೂಲಕ ಒಂದೆರಡು ಆನೆಗಳನ್ನಿಡಿದು ರೇಡಿಯೋ ಕಾಲರ್ ಅಳವಡಿಸಿದರೆ, ಮತ್ತೆ ಕೆಲ ಕಾಡಾನೆಗಳನ್ನು ಹಿಡಿದು ಆನೆ ಶಿಬಿರ ಧಾಮಕ್ಕೆ ಕೊಂಡೊಯ್ದಿದ್ದು ಬಿಟ್ಟರೆ ಮಲೆನಾಡು ಭಾಗದ ಬೆಳೆಗಾರರು, ರೈತರಿಗೆ ಶಾಶ್ವತವಾದ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ರೈತರು, ಬೆಳೆಗಾರರು ಕಾಡಾನೆಗಳ ಉಪಟಳದಿಂದಾಗಿ ಕೈಗೆ ಬಂದ ಬೆಳೆಗಳನ್ನು ಕಳೆದು ಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಕಳೆದ ಐದಾರು ದಿನಗಳಿಂದ ತಾಲೂಕಿನ ಚೀಕನಹಳ್ಳಿ ಸಮೀಪದ ಅಕ್ಕಪಕ್ಕದ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಒಂದೊಂದು ದಿನ ಒಂದೊಂದು ತೋಟಕ್ಕೆ ನುಗ್ಗುತ್ತಿವೆ. ಹಿಂಡಿನಲ್ಲಿದ್ದ ಕಾಡಾನೆಗಳು ಈಗ ಒಂಟಿಯಾಗಿ ಅಥವಾ ಎರಡೆರಡು ಆನೆಗಳು ಬೇರೆ ಬೇರೆಯಾಗಿ ತೋಟಗಳಿಗೆ ನುಗ್ಗುತ್ತಿವೆ. ರಸ್ತೆಗಳಲ್ಲೇ ಓಡಾಡುವುದಲ್ಲದೆ, ಎದುರಿಗೆ ಬಂದವರ ಮೇಲೆಯೇ ದಾಳಿ ಮಾಡುತ್ತಿರುವುದು ಮಲೆನಾಡಿಗರ ನಿದ್ದೆಗೆಡಿಸಿದರೆ, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಒಂದೊತ್ತಿನ ಕೂಳಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಆದಷ್ಟು ಬೇಗ ಕಾಡಾನೆಗಳ ಸಮಸ್ಯೆಗೆ ಸರ್ಕಾರ ಶಾಶ್ವತವಾದ ಪರಿಹಾರಕ್ಕೆ ಮುಂದಾಗಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net