

ಕುಶಾಲನಗರ: ಮದುವೆ ಸಮಾರಂಭದಲ್ಲಿ ಊಟ ಸೇವಿಸಿದ 60ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡು ಕೆಲವರು ಅಸ್ವಸ್ಥರಾಗಿದ್ದು ಹೆಬ್ಬಾಲೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹೆಬ್ಬಾಲೆ ಗ್ರಾಮದ ಕಲ್ಯಾಣ ಮಂಟಪವೊಂದರಲ್ಲಿ ಕಳೆದ ವಾರ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಕಲುಷಿತ ಊಟ ಸೇವನೆ ಮಾಡಿದ ಹಲವು ಜನರಿಗೆ ವಾಂತಿ-ಭೇದಿಯಿಂದಾಗಿ ಕುಶಾಲನಗರ, ಮೈಸೂರು, ಸಾಲಿಗ್ರಾಮದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಮದುವೆ ಸಮಾರಂಭದಲ್ಲಿ ರಾತ್ರಿ ಊಟ ಸೇವನೆ ಮಾಡಿದವರಿಗೆ ಮತ್ತು ಮರುದಿನ ಊಟ ಸೇವನೆ ಮಾಡಿದ ಹಲವು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಹೆಬ್ಬಾಲೆ ಮತ್ತು ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಯವರು ಸೇರಿದಂತೆ ಸಮಾರಂಭಕ್ಕೆ ಬಂದ ಹಲವರಲ್ಲಿ ವಾಂತಿ-ಭೇದಿ ಸೋಂಕು ಕಾಣಿಸಿಕೊಂಡು ಮೈಸೂರು ಮತ್ತು ಹಾಸನ ಜಿಲ್ಲೆಯ ಕೆಲವು ಕಡೆಗಳ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಕೆ.ಎಂ.ಸತೀಶ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾಕುಮಾರಿ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳ ತಂಡ ಹೆಬ್ಬಾಲೆಯಲ್ಲಿ ಎರಡು ದಿನ ಮೊಕ್ಕಾಂ ಹೂಡಿ, ಹೆಬ್ಬಾಲೆ ಮತ್ತು ಸುತ್ತಮುತ್ತಲಿನ ಗ್ರಾಮದವರು ವಾಂತಿ ಭೇದಿ ಹೆಚ್ಚಾಗಿ ಕಾಣಿಸಿಕೊಂಡವರಿಗೆ ಹೆಬ್ಬಾಲೆ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕುಶಾಲನಗರದ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ.
ಇದೀಗ ಎಲ್ಲರೂ ಗುಣಮುಖರಾಗಿ ಅವರವರ ಮನೆಗಳಿಗೆ ತೆರಳಿದ್ದಾರೆ. ವಾಂತಿ-ಭೇದಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ತಂಡ ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹೆಬ್ಬಾಲೆಯ ಎಲ್ಲ ಮನೆಗಳಿಗೆ ತೆರಳಿ ವಾಂತಿ ಭೇದಿ ಸೋಂಕು ಇರುವ ಬಗ್ಗೆ ಮಾಹಿತಿ ಪಡೆದು ಸೋಂಕುದಾರರ ಮಲ ಮತ್ತು ಕಲ್ಯಾಣ ಮಂಟಪ ನೀರನ್ನು ಹಾಸನದಲ್ಲಿರುವ ತಪಾಸಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇನ್ನು ಒಂದೆರೆಡು ದಿನದಲ್ಲಿ ವರದಿ ಬರುವ ನಿರೀಕ್ಷೆಯಿದೆ ಎಂದು ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದರು.
ಕ್ರಮಕ್ಕೆ ಮುಂದಾದ ಇಲಾಖೆ: ಹೆಬ್ಬಾಲೆಯಲ್ಲಿ ವಾಂತಿ-ಭೇದಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು, ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವ ಬಗ್ಗೆ ಮಾಹಿತಿ ನೀಡುತ್ತಿದ್ದು, ಶುಚಿತ್ವ ಕಾಪಾಡಲು ಮನವಿ ಸೇರಿದಂತೆ ಹಲವರ ಮಲ ಪರೀಕ್ಷೆಗೆ ಮುಂದಾಗಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ, ಶಾಂತಿ ಇತರರು ಅಸ್ವಸ್ಥಗೊಂಡವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.