

ಸಂತೋಷ ವೈದ್ಯ ಹುಬ್ಬಳ್ಳಿ
ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಕರ್ನಾಟಕ ಜಲ ಮಂಡಳಿಯ ಹಿಂದಿನ 328 ಹಂಗಾಮಿ ನೌಕರರು, ಅವಳಿ ನಗರದಲ್ಲಿ ಪ್ರಗತಿಯಲ್ಲಿರುವ ವಿಶ್ವ ಬ್ಯಾಂಕ್ನ ಆರ್ಥಿಕ ನೆರವಿನ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಅನುಷ್ಠಾನದ ನಿರ್ವಾಹಕರಾದ ಲಾರ್ಸನ್ ಆಂಡ್ ಟುಬ್ರೂ (ಎಲ್ ಆಂಡ್ ಟಿ) ಕಂಪನಿಯ ಜತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಇದರಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಸುಸ್ಥಿತಿಗೆ ಮರಳುವ ನಿರೀಕ್ಷೆ ಮೂಡಿದೆ.
ಅವಳಿ ನಗರದ ಎಲ್ಲ 82 ವಾರ್ಡ್ಗಳಿಗೆ ನಿರಂತರ ನೀರು ಪೂರೈಸುವ 1,207 ಕೋಟಿ ರೂ. ವೆಚ್ಚದ ಯೋಜನೆಯನ್ನು ಮಹಾನಗರ ಪಾಲಿಕೆಯ ಮಾಲೀಕತ್ವದಲ್ಲಿ ಅನುಷ್ಠಾನಗೊಳಿಸುವ ಗುತ್ತಿಗೆಯನ್ನು ಎರಡು ವರ್ಷಗಳ ಹಿಂದೆ ಎಲ್ ಆಂಡ್ ಟಿ ಗೆ ವಹಿಸಲಾಗಿತ್ತು.
ಅಲ್ಲಿಂದ ಹು-ಧಾ ದಲ್ಲಿ ನೀರು ಪೂರೈಕೆ ವ್ಯವಸ್ಥೆ ಹದಗೆಡುತ್ತ ಸಾಗಿದೆ. ಕೆಲವೊಂದು ಬಡಾವಣೆಗಳಲ್ಲಿ ಪ್ರತಿ 9-10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಈ ಲೋಪಕ್ಕೆ ವಿದ್ಯುತ್ ವ್ಯತ್ಯಯ, ಮಳೆಯ ಕೊರತೆ, ಜಲಾಶಯಗಳಲ್ಲಿ ನೀರಿನ ಅಭಾವ ಎಂಬ ಕಾರಣಗಳು ಆಡಳಿತ ವರ್ಗದಿಂದ ಬರುತ್ತಿರುತ್ತವೆ.
ಆದರೆ, ಮೂಲ ಸಮಸ್ಯೆ ಇದ್ದಿದ್ದು ಸ್ಥಳೀಯ ಪರಿಸ್ಥಿತಿಯ ಜ್ಞಾನವುಳ್ಳ ಕರ್ನಾಟಕ ಜಲಮಂಡಳಿಯ ಹಿಂದಿನ ಹಂಗಾಮಿ ನೌಕರರರನ್ನು ಕೆಲಸದಿಂದ ಕೈ ಬಿಟ್ಟಿದ್ದು. ಇವರ ಬದಲಿಗೆ ಎಲ್ ಆಂಡ್ ಟಿ ಕಂಪನಿ ಸುಮಾರು 600 ಜನರನ್ನು ನೇಮಿಸಿಕೊಂಡರೂ ನೀರು ಪೂರೈಕೆ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿರಲಿಲ್ಲ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹಾಗೂ ಮೇ ತಿಂಗಳ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಎಲ್ ಆಂಡ್ ಟಿ ಕಂಪನಿಯ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಗೊಂಡ ಪರಿಣಾಮ ಬದಲಾವಣೆ ಕಂಡು ಬಂದಿದೆ.
ಕಳೆದ 15-20 ದಿನಗಳ ಅವಧಿಯಲ್ಲಿ ಕರ್ನಾಟಕ ಜಲ ಮಂಡಳಿಯ ಹಿಂದಿನ 328 ಹಂಗಾಮಿ ನೌಕರರರನ್ನು ಎಲ್ ಆಂಡ್ ಟಿ ಕಂಪನಿ ಕೆಲಸಕ್ಕೆ ಸೇರಿಸಿಕೊಂಡಿದೆ.
ಹು-ಧಾ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಜಲಮಂಡಳಿಯ 583 ಹಂಗಾಮಿ ನೌಕರರನ್ನು 2022ರ ಏಪ್ರಿಲ್ನಲ್ಲಿ ಎಲ್ ಆಂಡ್ ಟಿ ಕಂಪನಿಗೆ ಹೊರ ಗುತ್ತಿಗೆ ನೌಕರರು ಎಂದು ಹಸ್ತಾಂತರಿಸಲಾಗಿತ್ತು.
ಆದರೆ, ಈ ನೌಕರರು ತಾವು ಹೊರ ಗುತ್ತಿಗೆ ನೌಕರಲ್ಲ ಎಂದು ವಾದಿಸುತ್ತ ಎಲ್ ಆಂಡ್ ಟಿ ಜತೆ ಕೆಲಸ ನಿರ್ವಹಿಸಲು ಹೆಸರು ನೋಂದಾಯಿಸಿರಲಿಲ್ಲ. ಆದರೆ, ನೀರು ಪೂರೈಕೆಯ ಕೆಲಸವನ್ನು ಮುಂದುವರಿಸಿದ್ದರು.
ಎಲ್ ಆಂಡ್ ಟಿ ಕಂಪನಿ ಜತೆ ಹೆಸರು ನೋಂದಾಯಿಸದ ಕಾರಣಕ್ಕೆ ಈ ನೌಕರರಿಗೆ ಸಂಬಳ ಪಾವತಿಯಾಗಿರಲಿಲ್ಲ. 2022ರ ಡಿಸೆಂಬರ್ ತಿಂಗಳವರೆಗೆ ಸಂಬಳ ಪಾವತಿ ಬಾಕಿ ಉಳಿದಿತ್ತು. ಇಲ್ಲಿಯವರೆಗೆ ಹಂತ ಹಂತವಾಗಿ 5 ತಿಂಗಳ ಬಾಕಿ ವೇತನ ಪಾವತಿಸಲಾಗಿದೆ. ಇನ್ನು 2 ತಿಂಗಳ ಬಾಕಿ ವೇತನ ಪಾವತಿಯಾಗಬೇಕಿದೆ.
2009 ರಿಂದ ನ್ಯಾಯಾಲಯದಲ್ಲಿದ್ದ ಪ್ರಕರಣದಲ್ಲಿ ಹುಬ್ಬಳ್ಳಿಯ 150 ಹಾಗೂ ಧಾರವಾಡದ 124 ಕರ್ನಾಟಕ ಜಲಮಂಡಳಿಯ ಹಂಗಾಮಿ ನೌಕರರನ್ನು ಕಾಯಂ ಮಾಡುವಂತೆ ಹೈ ಕೋರ್ಟ್ 2022ರ ನವಂಬರ್ನಲ್ಲಿ ತೀರ್ಪು ನೀಡಿತ್ತು.
ಇವರನ್ನು ಹೊರತು ಪಡಿಸಿ ಕರ್ನಾಟಕ ಜಲಮಂಡಳಿಯ 328 ಹಂಗಾಮಿ ನೌಕರರು ಇದೀಗ ಎಲ್ ಆಂಡ್ ಟಿ ಜತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಕರ್ನಾಟಕ ಜಲ ಮಂಡಳಿಯ ಹಿಂದಿನ 328 ನೌಕರರು ಎಲ್ ಆಂಡ್ ಟಿ ಕಂಪನಿಯ ಜತೆ ಕೆಲಸಕ್ಕೆ ಹಾಜರಾಗಿದ್ದಾರೆ. ಬಾಕಿ ಉಳಿದಿದ್ದ 5 ತಿಂಗಳ ವೇತನವನ್ನು ಪಾವತಿಸಲಾಗಿದೆ. ಇನ್ನುಳಿದ 2 ತಿಂಗಳ ವೇತನ ಬಾಕಿಯನ್ನು ಶೀಘ್ರದಲ್ಲೇ ನೀಡಲಾಗುವುದು. ಹು-ಧಾ ದಲ್ಲಿ ನೀರು ಪೂರೈಕೆಯನ್ನು ಸುವ್ಯವಸ್ಥೆಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಡಾ. ಗೋಪಾಲಕೃಷ್ಣ ಬಿ., ಪಾಲಿಕೆ ಆಯುಕ್ತ