ಛಿದ್ರಗೊಳ್ಳುತ್ತಿದೆ ಹಸಿರು ಹೊದಿಕೆ, 30ಕ್ಕೂ ಅಧಿಕ ಮರಗಳ ಅಪೋಶನಕ್ಕೆ ಸಿದ್ಧತೆ

Green Tree Story
Published on

ಹರೀಶ್ ಮೋಟುಕಾನ ಮಂಗಳೂರು

ಮಂಗಳೂರು ನಗರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಪೈಕಿ ಶೇ.90ರಷ್ಟು ಕಾಂಕ್ರೀಟ್ ಕಾಮಗಾರಿ. ರಸ್ತೆ, ಚರಂಡಿ ನಿರ್ಮಾಣದ ಸಂದರ್ಭ ಗಿಡ, ಮರಗಳು ಆಪೋಶನವಾಗುತ್ತಿವೆ. ಮತ್ತೆ ಗಿಡ ನೆಡುವ ಕೆಲಸ ಆಗುತ್ತಿಲ್ಲ. ಪರಿಣಾಮ ಅಂತರ್ಜಲ ಕುಸಿದು, ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ.

ಈ ಹಿಂದೆ ಅಭಿವೃದ್ಧಿ ಹೆಸರಿನಲ್ಲಿ ಕಂಕನಾಡಿ, ಬಂಟ್ಸ್‌ಹಾಸ್ಟೆಲ್, ವೆಲೆನ್ಸಿಯಾ ಮೊದಲಾದ ಕಡೆ ಬಹಳಷ್ಟು ಮರಗಳು ಬಲಿಯಾಗಿವೆ. ಸ್ಮಾರ್ಟ್‌ಸಿಟಿ ಯೋಜನೆ ಜಾರಿಯಾದ ಬಳಿಕ ಹಂಪನಕಟ್ಟೆ, ರೈಲ್ವೆ ನಿಲ್ದಾಣ ಬಳಿ, ಸ್ಟೇಟ್‌ಬ್ಯಾಂಕ್ ಮೊದಲಾದೆಡೆ ಮರಗಳು ಧರೆಗುರುಳಿವೆ. ಮತ್ತೆ 30ಕ್ಕೂ ಹೆಚ್ಚು ಮರಗಳಿಗೆ ಕೊಡಲಿಯೇಟು ನೀಡಲು ಸಜ್ಜಾಗಿದ್ದಾರೆ. ಅರಣ್ಯ ಇಲಾಖೆ ಹಾಗೂ ಪರಿಸರವಾದಿಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ಮರ ಕಡಿಯಲು ಆಕ್ಷೇಪ: ನಗರದಲ್ಲಿ ಯಾವುದೇ ಮರ ಕಡಿಯಬೇಕಾದರೆ ಅರಣ್ಯ ಇಲಾಖೆ ಅನುಮತಿ ಬೇಕು. ಅನುಮತಿಗೆ ಅರ್ಜಿ ಹಾಕಿರುವ ವಿಷಯವನ್ನು ಅಧಿಕಾರಿಗಳು ಟ್ರೀ ಕಮಿಟಿ ಗಮನಕ್ಕೆ ತರುತ್ತಾರೆ. ಬಳಿಕ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸುತ್ತಾರೆ. ಅನಿವಾರ್ಯವಾದರೆ ಮಾತ್ರ ಅನುಮತಿ ನೀಡುತ್ತಾರೆ. ಅನವಶ್ಯವಾಗಿ ಮರ ಕಡಿಯುವುದಕ್ಕೆ ಟ್ರೀ ಕಮಿಟಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಉರ್ವಸ್ಟೋರ್, ಜೈಲ್ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಮೊದಲಾದೆಡೆ ಸ್ಮಾರ್ಟ್‌ಸಿಟಿ ಕಾಮಗಾರಿಗೆ ಮರ ಕಡಿಯುವುದಕ್ಕೆ ಅರಣ್ಯ ಇಲಾಖೆ ಹಾಗೂ ಟ್ರೀ ಕಮಿಟಿ ಆಕ್ಷೇಪ ವ್ಯಕ್ತಪಡಿಸಿದೆ. ರೈಲ್ವೆ ನಿಲ್ದಾಣ ರಸ್ತೆಯ ಪ್ರೌಢಶಾಲಾ ವಠಾರದ 16 ಮರಗಳನ್ನು ಅನವಶ್ಯವಾಗಿ ಕಡಿಯುವುದಕ್ಕೆ ಬಿಡಬಾರದೆಂದು ಅರಣ್ಯ ಇಲಾಖೆ, ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿ ತೀರ್ಮಾನ ಮಾಡಿದ್ದೇವೆ ಎಂದು ಟ್ರೀ ಕಮಿಟಿಯ ಸಕ್ರೀಯ ಸದಸ್ಯ ದಿನೇಶ್ ಹೊಳ್ಳ ತಿಳಿಸಿದ್ದಾರೆ.

ಮಂಗಳೂರು ನಗರದಲ್ಲಿ ಕಾಂಕ್ರೀಟ್ ಭರಾಟೆಯಲ್ಲಿ ಹಸಿರು ಪರಿಸರ ನಾಶವಾಗುತ್ತಿದೆ. ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್ ಅಳವಡಿಕೆಯಿಂದ ಮಳೆ ನೀರು ಇಂಗುವುದಿಲ್ಲ. ಪರಿಣಾಮ ಅಂತರ್ಜಲ ಮಟ್ಟ ಕುಸಿಯುತ್ತಿದೆ. ರಾಜ್ಯ ಸರ್ಕಾರವೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದೆ. ಆದರೂ ಹಸಿರು ಪರಿಸರದ ಕಡೆಗೆ ಗಮನ ನೀಡದೆ ಇರುವುದು ದುರದೃಷ್ಟಕರ. ಮುಂದಿನ ಪೀಳಿಗೆ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ.

ಜಾಗೃತರಾಗದ ಜನತೆ: ಮಂಗಳೂರು ನಗರದಲ್ಲಿ ಮರಗಳಿಗೆ ಅವ್ಯಾಹತವಾಗಿ ಕೊಡಲಿಯೇಟು ಬೀಳುತ್ತಿದ್ದರೂ ಜನ ಪರಿಸರದ ಕಡೆಗೆ ಸ್ಪಂದನೆ ನೀಡುತ್ತಿಲ್ಲ. ಕಣ್ಣೆದುರಲ್ಲೇ ಮರ, ಹಸಿರು ಪರಿಸರ ನಾಶವಾಗಿ ಹೋಗುತ್ತಿದ್ದರೂ ಯಾರೊಬ್ಬರೂ ಮಾತನಾಡುತ್ತಿಲ್ಲ. ತಾಪಮಾನ ಈಗಾಗಲೇ ಗರಿಷ್ಠವಾಗುತ್ತಿದೆ. ಭವಿಷ್ಯದಲ್ಲಿ ನಗರದ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ಸ್ಮಾರ್ಟ್‌ಸಿಟಿ ನೆಪದಲ್ಲಿ ಮಂಗಳೂರಿನ ಹಸಿರು ಪರಿಸರ ನಾಶ ಮಾಡುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಅಂದರೆ ಕಾಂಕ್ರೀಟ್ ರಸ್ತೆ ಮಾಡುವುದಷ್ಟೇ ಅಲ್ಲ. ಅದರ ಜತೆ ಅಂತರ್ಜಲ, ಗಿಡ, ಮರ ಎಂಬ ಹಸಿರು ಹೊದಿಕೆ ಕೂಡ ಅಷ್ಟೇ ಮುಖ್ಯ. ಅನವಶ್ಯಕವಾಗಿ ಮರ ಕಡಿಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಟ್ರೀ ಕಮಿಟಿ ಪ್ರಯತ್ನ ನಡೆಸುತ್ತಿದೆ. ದಿನೇಶ್ ಹೊಳ್ಳ ಪರಿಸರವಾದಿ, ಮಂಗಳೂರು ನಗರ ಪ್ರದೇಶಗಳಲ್ಲಿ ಮರಗಳಿಗೆ ಹಾನಿಯಾಗದಂತೆ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಸಲಾಗಿದೆ. ಅನಿವಾರ್ಯವಾಗಿರುವ ಮರಗಳನ್ನು ಮಾತ್ರ ತೆರವು ಮಾಡಲಾಗಿದೆ. ಒಂದು ಮರ ತೆಗೆದರೆ ಎರಡು ಗಿಡ ನೆಡುವ ಬಗ್ಗೆ ಅರಣ್ಯ ಇಲಾಖೆಯವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಗರ ಅರಣ್ಯೀಕರಣಕ್ಕೆ ಮಹತ್ವ ನೀಡಲಾಗಿದೆ. ಅರುಣಪ್ರಭ ಮ್ಯಾನೇಜರ್ ಸ್ಮಾರ್ಟ್‌ಸಿಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net