250ಕ್ಕೂ ಅಧಿಕ ವಾಹನ ಜಪ್ತಿ

vehicle new
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಿದ್ದು, ಪೊಲೀಸರು ಗುರುವಾರ ವಿವಿಧ ಕಡೆ ತಪಾಸಣೆ ನಡೆಸಿದ್ದಾರೆ. ಕಮಿಷನರೆಟ್ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಸಂಚರಿಸಿದ 154 ಹಾಗೂ ಗ್ರಾಮಾಂತರದಲ್ಲಿ 100ಕ್ಕಿಂತಲೂ ಅಧಿಕ ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.

ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆ, ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ ಜಿಲ್ಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಆದೇಶ ಪಾಲಿಸಬೇಕಾಗಿದೆ. ತುರ್ತು ವಾಹನಗಳನ್ನು ಬಿಟ್ಟು ಉಳಿದಂತೆ ದ್ವಿಚಕ್ರ ವಾಹನಗಳು, ಕಾರುಗಳು ಸಹಿತ ಎಲ್ಲ ವಿಧದ ವಾಹನ ಸಂಚಾರದ ಮೇಲೆ ಏ.2ರ ಮಧ್ಯಾಹ್ನ 12.30 ರ ಬಳಿಕ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಬುಧವಾರ ಟ್ವೀಟ್ ಮಾಡಿ ತಿಳಿಸಿದ್ದರು.

ಹಂಪನಕಟ್ಟೆ, ಲಾಲ್‌ಭಾಗ್, ಕ್ಲಾಕ್ ಟವರ್, ನಂತೂರು, ಕೆಪಿಟಿ, ಕಾವೂರು, ಕಂಕನಾಡಿ ಮೊದಲಾದ ಕಡೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಅನಾವಶ್ಯಕವಾಗಿ ವಾಹನಗಳಲ್ಲಿ ತಿರುಗಾಡುತ್ತಿದ್ದವರನ್ನು ಪತ್ತೆ ಮಾಡಿ, ಒಟ್ಟು 154 ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರಕು ಸಾಗಾಟದ ಲಾರಿಗಳು ಹಾಗೂ ಗ್ಯಾಸ್ ಟ್ಯಾಂಕರ್‌ಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಕ್ರಮ ಕೈಗೊಂಡಿದ್ದಾರೆ.

ಗ್ರಾಮಾಂತರದಲ್ಲಿ ಜನರು ನಿರಾಳ

ಸಾರ್ವಜನಿಕರಿಗೆ ಅವಶ್ಯ ಸಾಮಗ್ರಿ ಖರೀದಿಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ತನಕ ಅವಕಾಶ ಮಾಡಿ ಕೊಟ್ಟಿರುವುದರಿಂದ ಗುರುವಾರವೂ ಜನರು ನಿರಾಳವಾಗಿ ದಿನಸಿ ಹಾಗು ತರಕಾರಿಗಳನ್ನು ಖರೀದಿಸಿದರು. ಕೆಲವು ಸೂಪರ್ ಮಾರ್ಕೆಟ್‌ಗಳಲ್ಲಿ ಸರತಿ ಸಾಲು ಕಂಡು ಬಂತು. ಎಲ್ಲರೂ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಖರೀದಿಯಲ್ಲಿ ತೊಡಗಿದ್ದರು. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಡಬ, ಮೂಡುಬಿದಿರೆ ಮೊದಲಾದ ತಾಲೂಕು ಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲೂ ಜನರು ನಿರಾಳವಾಗಿ ಅವಶ್ಯ ಸಾಮಗ್ರಿ ಖರೀದಿಸಿದರು. ಕೆಲವು ಕಡೆ ಅಂಗಡಿಗಳಿಂದ ನೇರ ಮನೆ ಮನೆಗೆ ಪೂರೈಕೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ.

ರಸ್ತೆ ಬದಿ ತರಕಾರಿ ಮಾರಾಟ

ತರಕಾರಿ, ಹಣ್ಣುಗಳನ್ನು ನಗರದ ವಿವಿಧ ಕಡೆ ರಸ್ತೆ ಬದಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡಿದ್ದಾರೆ. ಸೆಂಟ್ರಲ್ ಮಾರುಕಟ್ಟೆಯನ್ನು ಸಂಪೂರ್ಣ ಸ್ತಬ್ಧ ಮಾಡಿರುವುದರಿಂದ ಚಿಲ್ಲರೆ ವ್ಯಾಪಾರಿಗಳು ನಿಗದಿ ಪಡಿಸಿದ ಅವಧಿಯಲ್ಲಿ ರಖಂ ಆಗಿ ಖರೀದಿಸಿ ರಸ್ತೆ ಬದಿಗೆ ತಂದು ರಾಶಿ ಹಾಕಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಸ್ಟೇಟ್‌ಬ್ಯಾಂಕ್‌ನಲ್ಲೂ ಬೀದಿ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟದಲ್ಲಿ ತೊಡಗಿದ್ದರು. ಗ್ರಾಹಕರು ಅಲ್ಲಿಂದ ಬೇಕಾದ ತರಕಾರಿ, ಹಣ್ಣುಗಳನ್ನು ಖರೀದಿಸಿದರು. ಮಧ್ಯಾಹ್ನ 12 ಗಂಟೆ ವೇಳೆಗೆ ಎಲ್ಲವೂ ಬಂದ್ ಆಯಿತು.

ಲಾಕ್‌ಡೌನ್ ಉಲ್ಲಂಘನೆ 25 ಕೇಸು

ಕಾಸರಗೋಡು: ಲಾಕ್‌ಡೌನ್ ಆದೇಶ ಉಲ್ಲಂಘನೆ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 25 ಕೇಸು ದಾಖಲಿಸಲಾಗಿದ್ದು, 45 ಮಂದಿಯನ್ನು ಬಂಧಿಸಿ, 18 ವಾಹನ ವಶಪಡಿಸಲಾಗಿದೆ. ಕುಂಬಳೆ, ವಿದ್ಯಾನಗರ, ಚಿತ್ತಾರಿಕಲ್, ಚಂದೇರ ಪೊಲೀಸ್ ಠಾಣೆಯಲ್ಲಿ ತಲಾ 2, ಆದೂರು 3, ಮೇಲ್ಪರಂಬ, ವೆಳ್ಳರಿಕುಂಡ್ ತಲಾ 5, ಅಂಬಲತ್ತರ, ಹೊಸದುರ್ಗ, ನೀಲೇಶ್ವರ, ರಾಜಪುರಂ ಠಾಣೆಗಳಲ್ಲಿ ತಲಾ ಒಂದು ಕೇಸು ದಾಖಲಾಗಿವೆ. ಈವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 269 ಕೇಸುಗಳು ನೋಂದಣಿಯಾಗಿವೆ. 390 ಮಂದಿಯನ್ನು ಬಂಧಿಸಲಾಗಿದ್ದು, 176 ವಾಹನಗಳನ್ನು ವಶಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net