

ತರೀಕೆರೆ: ತಾಲೂಕಿನ ಬೇಲೇನಹಳ್ಳಿ ತಾಂಡ ಸಮೀಪದ ಅಡಕೆ ತೋಟವೊಂದಕ್ಕೆ ಬೆಂಕಿ ತಗುಲಿ 250ಕ್ಕೂ ಹೆಚ್ಚು ಅಡಕೆ ಗಿಡ ನಾಶವಾಗಿದೆ. ಬೇಲೇನಹಳ್ಳಿ ತಾಂಡದ ರೈತ ಎಸ್.ಚಂದ್ರಾನಾಯ್ಕ ಎಂಬುವವರಿಗೆ ಸೇರಿದ ಅಡಕೆ ತೋಟಕ್ಕೆ ಬೆಂಕಿ ಬಿದ್ದಿದ್ದು, 1.20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 250ಕ್ಕೂ ಹೆಚ್ಚು ಗಿಡಗಳು ಬೆಂಕಿಗೆ ಆಹುತಿಯಾಗಿವೆ. ತೋಟದಲ್ಲಿ ಇತ್ತೀಚೆಗೆ ಕಳೆ ನಾಶಕ ಸಿಂಪಡಿಸಿದ್ದರಿಂದ ವ್ಯಾಪಕವಾಗಿ ಬೆಳೆದಿದ್ದ ಗಿಡಗಂಟಿ, ಕಳೆ ಸಂಪೂರ್ಣ ಒಣಗಿತ್ತು. ಇದನ್ನು ಗಮನಿಸಿರುವ ಕಿಡಿಗೇಡಿಗಳು ದುರುದ್ದೇಶದಿಂದ ತೋಟಕ್ಕೆ ಬೆಂಕಿ ಹಚ್ಚಿ ದ್ದಾರೆ ಎನ್ನಲಾಗಿದೆ. ಮೂರ‌್ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಬೆಳೆದಿರುವ ಅಡಕೆ ಗಿಡ ಬೆಂಕಿಗಾಹುತಿಯಾಗಿರುವುದರಿಂದ ರೈತ ಚಂದ್ರಾನಾಯ್ಕ ಕಂಗಾಲಾಗಿದ್ದಾರೆ.