

ಮುಂಡಗೋಡ: ಯಾರೋ ದುರುಳರು ಮೂರು ವರ್ಷದ 240ಕ್ಕೂ ಅಧಿಕ ಅಡಕೆ ಮರಗಳನ್ನು ಕಡಿದು ಹಾಕಿದ ಮನಕಲಕುವ ಘಟನೆ ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಪುರದಲ್ಲಿ ನಡೆದಿದೆ.
ನಂದಿಪುರ ಗ್ರಾಮದ ರತ್ನಾ ಬಸವರಾಜ ಓಣಿಕೇರಿ ಎಂಬುವವರಿಗೆ ಶಿಂಗ್ನಳ್ಳಿ ಗ್ರಾಮದ ಸನಂ. 35ರಲ್ಲಿ 3.19 ಎಕರೆ ಜಮೀನಿದೆ. ಆ ಜಮೀನಿನಲ್ಲಿ ಕಳೆದ ಮೂರು ವರ್ಷಗಳ ಹಿಂದಷ್ಟೇ ಅಡಕೆ ಮರಗಳನ್ನು ಹಚ್ಚಿ ಬೆಳೆಸಲಾಗಿತ್ತು. ಆದರೆ, ಯಾರೋ ದುರುಳರು ಗುರುವಾರ ನಸುಕಿನ ಜಾವದಲ್ಲಿ ತೋಟದಲ್ಲಿದ್ದ 240ಕ್ಕೂ ಅಧಿಕ ಅಡಕೆ ಮರಗಳನ್ನು ಎರ್ರಾಬಿರ್ರಿಯಾಗಿ ಕತ್ತರಿಸಿ ಹಾಕಿ ಅಟ್ಟಹಾಸ ಮೆರದಿದ್ದಾರೆ. ಮೂರು ವರ್ಷದಿಂದ ಕಷ್ಟ ಪಟ್ಟು, ಲಕ್ಷಾಂತರ ರೂ. ವ್ಯಯಿಸಿ ಹಗಲು-ರಾತ್ರಿ ಕಷ್ಟಪಟ್ಟು ದುಡಿದು, ಮನೆ ಮಕ್ಕಳಂತೆ ಸಾಕಿ ಸಲುಹಿದ್ದ ಅಡಕೆ ಮರಗಳನ್ನು ರಾತ್ರಿ ಕಳೆದು ಬೆಳಕು ಮೂಡುವುದರೊಳಗೆ ಹಾಳುಗೆಡವಲಾಗಿದೆ. ಇದನ್ನು ಕಂಡ ರೈತ ಕುಟುಂಬಕ್ಕೆ ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿದೆ.
ಅಡಕೆ ಮರಗಳನ್ನು ಕತ್ತರಿಸಿ ಹಾಳುಗೆಡವಿರುವ ದುರುಳರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ರತ್ನಾ ಬಸವರಾಜ ಓಣಿಕೇರಿ ಪೊಲೀಸ್ ದೂರು ನೀಡಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸರು ತನಿಖೆ ನಡೆಸಿದ್ದಾರೆ.