ಹಾಸನ ಸಮಾವೇಶಕ್ಕೆ 20 ಸಾವಿರಕ್ಕೂ ಹೆಚ್ಚು ಜನ

3 KRN1
ಕೆ.ಆರ್.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಕಾರ್ಯ ಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿದರು. ಶಾಸಕ ಡಿ.ರವಿಶಂಕರ್, ಕೆ.ಪಿ.ಯೋಗೇಶ್, ಉದಯಶಂಕರ್ ಇತರರು ಇದ್ದರು.
Published on

ಕೆ.ಆರ್.ನಗರ: ಡಿ.5 ರಂದು ಹಾಸನದಲ್ಲಿ ಕಾಂಗ್ರೆಸ್ ಹಾಗೂ ಸ್ವಾಭಿಮಾನಿಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿರುವ ಜನ ಕಲ್ಯಾಣ ಸಮಾವೇಶಕ್ಕೆ ಕ್ಷೇತ್ರದಿಂದ 20 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯನವರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿದ ನಂತರ ನಡೆಯುತ್ತಿರುವ ಅತಿದೊಡ್ಡ ಸಮಾವೇಶ ಇದಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಪಕ್ಷದಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪಕ್ಷದ ಪ್ರಮುಖರೊಡನೆ ಸಂಪರ್ಕ ಸಾಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರಬೇಕು ಎಂದು ತಿಳಿಸಿದರು. ಕ್ಷೇತ್ರದ ವ್ಯಾಪ್ತಿಯ ಸಾಲಿಗ್ರಾಮ ಮತ್ತು ಕೆ.ಆರ.ನಗರ ತಾಲೂಕುಗಳಿಂದ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮ್ಮ ಸಂಪೂರ್ಣ ಬೆಂಬಲ ಪ್ರದರ್ಶಿಸಬೇಕು. ಎಲ್ಲರೂ ಸಮಾವೇಶದ ಯಶಸ್ಸಿಗೆ ಪ್ರಾಮಾಣಿಕರಾಗಿ ಕೆಲಸ ಮಾಡಬೇಕು ಎಂದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ಮೂರು ಉಪಚುನಾವಣೆಗಳಲ್ಲಿ ಪಕ್ಷದ ಜಯಭೇರಿ ಬಾರಿಸಿದ್ದು, ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಯ ಎದುರಾಗಲಿರುವುದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆ ಆರಂಭಿಸಿ ಎಂದು ನಿರ್ದೇಶನ ನೀಡಿದರು.

ಪಕ್ಷ ಸಂಘಟಿಸಿ ಸಮಾವೇಶಕ್ಕೆ ಹೆಚ್ಚು ಜನರನ್ನು ಕರೆ ತರುವ ನಾಯಕರಿಗೆ ಜಿ.ಪಂ. ಮತ್ತು ತಾ.ಪಂ. ಚುನಾವಣೆಯ ಸಮಯದಲ್ಲಿ ಹೆಚ್ಚಿನ ಅವಕಾಶ ನೀಡುವುದಾಗಿ ಭರವಸೆ ನೀಡಿದರಲ್ಲದೆ, ಈ ಸವಾಲನ್ನು ಸ್ವೀಕರಿಸಿ. ಮಹಿಳಾ ಮುಖಂಡರು ಸಹ ಈ ವಿಚಾರದಲ್ಲಿ ಹಿಂದೆ ಬೀಳಬಾರದು ಎಂದು ಹುರಿದುಂಬಿಸಿದರು.

ಮಹಿಳಾ ಘಟಕದ ಅಧ್ಯಕ್ಷರಾದ ರಾಣಿ, ಲತಾ, ಜಿಪಂ ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಜಯರಾಮೇಗೌಡ, ನಾಗರತ್ನ ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷರಾದ ಹಾಡ್ಯ ಮಹದೇವಸ್ವಾಮಿ, ಎಚ್.ಟಿ.ಮಂಜುನಾಥ್, ಕೆ.ಪಿ.ಯೋಗೇಶ್, ಮಾಜಿ ಸದಸ್ಯ ಜಿ.ಎಸ್.ಮಂಜುನಾಥ್, ಪುರಸಭೆ ಸದಸ್ಯರಾದ ನಟರಾಜು, ಮಿಕ್ಸರ್ ಶಂಕರ್, ಮಾಜಿ ಅಧ್ಯಕ್ಷ ನರಸಿಂಹರಾಜು, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net