

ಬೆಳಗಾವಿ: ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಎರಡ್ಮೂರು ದಿನಗಳ ಅವಧಿಯಲ್ಲಿ ಕಲುಷಿತ ನೀರು ಕುಡಿದು 20ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.
ಕಲುಷಿತ ನೀರು ಕುಡಿದ ಪರಿಣಾಮ ಸೋಮವಾರ ಗ್ರಾಮದ ವಿವಿಧ ಭಾಗಗಳಲ್ಲಿನ 40ಕ್ಕೂ ಅಧಿಕ ಜನರಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಆ ಪೈಕಿ 21 ಜನರನ್ನು ಜಿಲ್ಲಾಸ್ಪತ್ರೆ, ಬೈಲಹೊಂಗಲ ತಾಲೂಕ ಆಸ್ಪತ್ರೆ ಸೇರಿ ವಿವಿಧ ಅಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ ಕೋಣಿ, ‘ಪ್ರಾಥಮಿಕ ಮಾಹಿತಿ ಪ್ರಕಾರ ಕಲುಷಿತ ನೀರು ಕುಡಿದ ಪರಿಣಾಮ ಸಾರ್ವಜನಿರಲ್ಲಿ ಅಸ್ವಸ್ಥತೆ ಕಂಡುಬಂದಿದೆ. ತಕ್ಷಣ ನೀರು ಪೂರೈಕೆ ಸ್ಥಗಿತಗೊಳಿಸಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರ ಪೈಕಿ ವೃದ್ಧೆಯೊಬ್ಬರನ್ನು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾತ್ಕಾಲಿಕವಾಗಿ ಚಚಡಿ ಗ್ರಾಮದಲ್ಲಿ ಹೆಚ್ಚುವರಿ ಕ್ಲಿನಿಕ್ ತೆರೆಯಲಾಗಿದ್ದು, ನಾಲ್ಕು ಆಂಬುಲೆನ್ಸ್ ಸಹಿತ ವೈದ್ಯಕೀಯ ತಂಡ ನಿಯೋಜಿಸಲಾಗಿದೆ. ಕುಡಿಯುವ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಅಸ್ವಸ್ಥರ ಭೇಟಿ ನಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದ ಡಿಎಚ್‌ಒ, ಗ್ರಾಮದಲ್ಲಿರುವ ನೀರು ಪೂರೈಕೆ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಿ, ಕುದಿಸಿ ಆರಿಸಿದ ನೀರು ಕುಡಿಯುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸಂಜಯ ದೊಡಮನಿ, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ತಾಲೂಕ ವೈದ್ಯಾಧಿಕಾರಿ ಡಾ.ಶ್ರೀಪಾದ ಸಬ್ನಿಸ್ ಸೇರಿದಂತೆ ಗ್ರಾಪಂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.