ಗುಂಜಾವತಿ ಅರಣ್ಯ ವ್ಯಾಪ್ತಿಯಲ್ಲಿ 16ಕ್ಕೂ ಹೆಚ್ಚು ಸಾಗವಾನಿ ಮರ ಕಡಿದು ಸಾಗಾಟ

20mnd1a- sagavani tree
Published on

ಮುಂಡಗೋಡ: ತಾಲೂಕಿನ ಗುಂಜಾವತಿ ಯರೇಬೈಲ್ ಗ್ರಾಮಗಳ ಮಧ್ಯದಲ್ಲಿನ ಅರಣ್ಯದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಸಾಗವಾನಿ ಮರಗಳನ್ನು ಕಡಿದು ಸಾಗಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ಗುಂಜಾವತಿ ಅರಣ್ಯ ವ್ಯಾಪ್ತಿಯಲ್ಲಿ ಬೃಹತ್ ಅರಣ್ಯ ಪ್ರದೇಶವಿದೆ. ಗುಂಜಾವತಿಯಿಂದ ಯರೆಬೈಲ್ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಅರಣ್ಯಗಳ್ಳರು 16ಕ್ಕೂ ಹೆಚ್ಚು ಸಾಗವಾನಿ ಮರಗಳನ್ನು ಕಡಿದು ಸ್ಥಳದಲ್ಲಿಯೇ ಕೆತ್ತನೆ ಮಾಡಿ ಸಾಗಾಟ ಮಾಡಿರುವುದು ಕಂಡು ಬಂದಿದೆ. ಮರದ ಬುಡ ಹಾಗೂ ಮುಂಭಾಗವನ್ನು ಸ್ಥಳದಲ್ಲಿಯೇ ಬಿಟ್ಟು ಮಧ್ಯದ ಭಾಗವನ್ನು ಮಾತ್ರ ಕಳ್ಳರು ಕೆತ್ತನೆ ಮಾಡಿ ಸಾಗಾಟ ಮಾಡಿದ್ದಾರೆ.


ಕಳ್ಳತನವಾಗಿರುವ ಕೆಲವು ಮರದ ಬುಡಕ್ಕೆ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ ನಂಬರ್ ಹಾಕಿದ್ದಾರೆ. ಉಳಿದ ಮರಗಳಿಗೆ ಯಾವುದೇ ನಂಬರ್ ಹಾಕಿಲ್ಲ. ಅರಣ್ಯದಲ್ಲಿನ ಮರಗಳು ಕಳ್ಳತನವಾಗುತ್ತಿರುವುದು ಆ ಭಾಗದ ವಾಚರ್​ಗಳು ಹಾಗೂ ಅರಣ್ಯ ರಕ್ಷಕರಿಗೆ ಮಾಹಿತಿ ಇಲ್ಲವೆ. ಅರಣ್ಯ ಕಾಯಬೇಕಿದ್ದ ಇಲ್ಲಿನ ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.


ಮರ ಕಡಿದು ಉರುಳಿಸಿ ಅಲ್ಲಿಯೇ ಕೆತ್ತನೆ ಮಾಡಿಕೊಂಡು ಹೋಗಿರುವುದನ್ನು ಗಮನಿಸಿದರೆ ಅರಣ್ಯ ಇಲಾಖೆಯ ಸಿಬ್ಬಂದಿ ಶಾಮೀಲಾಗಿರಬಹುದೆ? ಎಂಬ ಪ್ರಶ್ನೆಯೂ ಸಾರ್ವಜನಿಕರನ್ನು ಕಾಡುತ್ತಿದೆ.


ಈ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಕರ್ತವ್ಯ ನಿರ್ಲಕ್ಷ್ಯ ವಹಿಸಿರುವ ಅರಣ್ಯ ರಕ್ಷಕರು ಹಾಗೂ ವಾಚರ್​ಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದು ಅವಶ್ಯವಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net