

ಹಾಸನ: ತ್ರಿಕಾಲಂ ಕಿರುಚಿತ್ರಕ್ಕೆ 160ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿದ್ದು, ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ ಎಂದು ಚಿತ್ರದ ನಿರ್ಮಾಪಕ ಜಗದೀಶ್ ಚೌಡಹಳ್ಳಿ ಹೇಳಿದರು.
ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಚಿತ್ರತಂಡವು ಕಥೆಯನ್ನು ನಮಗೆ ಹೇಳಿದಾಗ ಚಿತ್ರಕ್ಕೆ ಹಣ ಹಾಕಿದರೆ ವಾಪಸ್ ನಮಗೆ ಸಿಗುತ್ತದೆಯೇ ಎಂದು ಕೇಳಿದೆ. ಇದು ಟೆಲಿ ಫಿಲಂ ಆಗಿರುವುದರಿಂದ ಖರ್ಚು ಮಾಡಿದ ಹಣ ಯಾವ ಕಾರಣಕ್ಕೂ ಬರುವುದಿಲ್ಲ. ಹೆಸರು ಮಾಡಬಹುದು. ದೊಡ್ಡ ದೊಡ್ಡ ಪ್ರಶಸ್ತಿ ಬಂದಾಗ ಅದು ನಿಮ್ಮನ್ನೆ ಕೈ ಬೀಸಿ ಕರೆಯುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
51 ನಿಮಿಷ ಇರುವ ಟೆಲಿ ಫಿಲಂ ಚೆನ್ನಾಗಿ ಮೂಡಿ ಬಂದಿದೆ. ಒಂದು ಗಡಿಯಾರವನ್ನು ಇಟ್ಟುಕೊಂಡು ಮೂರು ಕಾಲವನ್ನು ಅದಕ್ಕೆ ಸರಿದೂಗಿಸುವ ರೀತಿಯಲ್ಲಿ ಕಥೆ ಹೆಣೆದಿರುವುದು ನನಗೆ ಇಷ್ಟವಾಯಿತು. ಈ ಚಿತ್ರ ನಿರ್ಮಿಸಲು ಅವರಿಗೆ ಸಂಪೂರ್ಣ ಸಹಕಾರ ಕೊಟ್ಟಿದ್ದರಿಂದ ಉತ್ತಮ ಚಿತ್ರವನ್ನು ತೆಗೆದಿದ್ದಾರೆ. ಆ ಚಿತ್ರಕ್ಕೆ 160 ಪ್ರಶಸ್ತಿಗಳಿಗೆ ಭಾಜನವಾಗಿರುವುದು ಖುಷಿ ತಂದಿದೆ ಎಂದರು.
ಚಿತ್ರದ ನಿರ್ದೇಶಕ ಹಾಸನದ ಸ್ಟ್ಯಾನಿ ಜಾಯ್ಸನ್ ಮಾತನಾಡಿ, ಹಾಸನದ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಿರು ಚಿತ್ರ ನಿರ್ಮಾಣ ಮಾಡಿದ್ದು, ನಾಯಕ ನಟನಾಗಿ ಉದಯೋನ್ಮುಖ ಪ್ರತಿಭೆ ಯೋಗೀಶ್ ಅವರು 6 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಂಥೋನಿ ರಿತಿಕ್ ಛಾಯಾಗ್ರಹಣ ಮಾಡಿದ್ದಾರೆ. ಮೈಸೂರು ದಸರಾ ಚಲನಚಿತ್ರೋತ್ಸವ ಸೇರಿದಂತೆ ಯುನೈಟೆಡ್ ಸ್ಟೇಟ್ಸ್, ಇಂಗ್ಲೆಂಡ್, ದೆಹಲಿ, ಬಾಂಗ್ಲಾದೇಶ, ಚೀನಾ ಸೇರಿದಂತೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಚಲನ ಚಿತ್ರೋತ್ಸವದಲ್ಲಿ ಈ ಕಿರು ಚಿತ್ರ ಹಲವು ಪ್ರದರ್ಶನಗಳನ್ನು ಕಂಡಿದೆ. ಈವರೆಗೆ 48 ಫಿಲಂ ಫೆಸ್ಟಿವಲ್ಸ್‌ಗಳಿಗೆ ಪ್ರವೇಶ ಪಡೆದು ವಿವಿಧ ಕ್ಯಾಟಗರಿಯಲ್ಲಿ 158 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಿಶೇಷವಾಗಿ ದಾದಾಸಾಹೇಬ್ ಪಾಲ್ಕೆ ಅವಾರ್ಡ್‌ಗೂ ಕೂಡ ಕಿರು ಚಿತ್ರ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ನಿರುದ್ಯೋಗಿಯೊಬ್ಬ ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿ ತನ್ನ ದುಡಿಮೆ ಆರಂಭಿಸಿದಾಗ ಆತ ಎದುರಿಸಬೆಕಾಗುವ ಆಡಳಿತಾತ್ಮಕ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಹಾಗೂ ಇವುಗಳಿಗೆ ಸಂಬಂಧಿಸಿದ ರೀತಿ ನೀತಿಗಳಿಂದ ಹೈರಾಣಾಗಿ ಹೇಗೆ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾನೆ ಎಂಬುದು ಕಥೆಯ ಒಂದು ಭಾಗ. ಮತ್ತೊಂದು ಭಾಗದಲ್ಲಿ ವಿಪರೀತ ಮಾನಸಿಕ ತೊಳಲಾಟದ ಮಾನಸಿಕ ಅಸ್ವಸ್ಥರನ್ನು ಅದೇ ಸಮಾಜ ಹಾಗೂ ಸಂಸಾರ ಹೇಗೆ ಕೆಟ್ಟದಾಗಿ ನಡೆಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಚಿತ್ರದಲ್ಲಿ ಸಾಂಕೇತಿಕವಾಗಿ ಗಡಿಯಾರದ ಮೂರು ಮುಳ್ಳುಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಯಕ ನಟ ಯೋಗೀಶ್, ನಟ ಸ್ವಾಗತ್, ಕ್ಯಾಮಾರಾಮನ್ ಅಂತೋಣಿ ರಿತೀಕ್, ಸೌಂಡ್ ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ಶಕೀಲ್ ಅಹಮದ್ ಇತರರು ಉಪಸ್ಥಿತರಿದ್ದರು.