ನೀತಿ ಸಂಹಿತೆ ಘೋಷಣೆ ಆದಾಗಿನಿಂದ ಇದುವರೆಗೆ 144 ಕೋಟಿಗೂ ಅಧಿಕ ಹಣ ವಶ: ಪರಿಶೀಲನೆ-ಬಂದೋಬಸ್ತ್​​ ಮತ್ತಷ್ಟು ಬಿಗಿ

Police Checking
ಬೆಂಗಳೂರಿನಲ್ಲಿ ಪೊಲೀಸರಿಂದ ಪರಿಶೀಲನೆ
Published on

ಬೆಂಗಳೂರು: ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿರುವ ಪೊಲೀಸರು ಪ್ರಯಾಣಿಕರು ಸಾಗಿಸುವ ವಸ್ತುಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ದಂಡು ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ ಮತ್ತು ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಪ್ರತಿ ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲನೆ ನಡೆಸಿ ಪ್ರಯಾಣಿಕರನ್ನು ಹೊರ ಬಿಡುತ್ತಿದ್ದಾರೆ.

ನೀತಿ ಸಂಹಿತೆ ಘೋಷಣೆಯಾದ ದಿನದಿಂದ ಇದುವರೆಗೂ 144 ಕೋಟಿಗೂ ಅಧಿಕ ನಗದು ಮತ್ತು ವಸ್ತುಗಳನ್ನು ಪೊಲೀಸರು-ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಬಾಕಿ ಇರುವುದರಿಂದ ಅಕ್ರಮ ನಗದು, ಮದ್ಯ, ಸೀರೆ, ಕುಕ್ಕರ್ ಮತ್ತು ಇತರೆ ವಸ್ತುಗಳನ್ನು ಅಕ್ರಮವಾಗಿ ಸಾಗಿಸಿ ಮತದಾರರಿಗೆ ಹಂಚುವ ಸಾಧ್ಯತೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳ ಫ್ಲೈಯಿಂಗ್ ಸ್ಕ್ವಾಡ್​ಗಳು ನಗರದ ಪ್ರಮುಖ ಸ್ಥಳಗಳಲ್ಲಿ ಚೆಕ್​ಪೋಸ್ಟ್‌ ನಿರ್ಮಿಸಿ ಅನುಮಾನ ಬಂದ ವಾಹನಗಳನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ರೀತಿಯ ಪರಿಶೀಲನೆ ವೇಳೆ ಲಕ್ಷಾಂತರ ರೂ. ನಗದು ಜತೆಗೆ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದಾರೆ. ಗುರುವಾರವಷ್ಟೇ ಆಟೋದಲ್ಲಿ 1 ಕೋಟಿ ರೂ. ನಗದನ್ನು ಟೌನ್‌ಹಾಲ್ ಸಮೀಪ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಎಸ್.ಜೆ. ಪಾರ್ಕ್ ಪೊಲೀಸರು ಜಪ್ತಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದರು.

ಪೊಲೀಸರಿಂದ 54 ಲಕ್ಷ ರೂ ಜಪ್ತಿ

ಎರಡು ಪ್ರತ್ಯೇಕ ಪ್ರಕರಣದಲ್ಲಿ ದಾಖಲೆ ಇಲ್ಲದೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 54 ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಸವನಗುಡಿ ಠಾಣೆ ಪೊಲೀಸರು 18 ಲಕ್ಷ ರು. ನಗದನ್ನು ಜಪ್ತಿ ಮಾಡಿದ್ದಾರೆ. ಪಟಾಲಮ್ಮ ದೇವಸ್ಥಾನ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ 11 ಗಂಟೆಗೆ ಬಸವನಗುಡಿ ಠಾಣೆ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕ್ರೇಟಾ ಕಾರಿನಲ್ಲಿ 18 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ವೇಳೆ ರಿಷಬ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಇದು ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ ಹಣ. ಬಸವನಗುಡಿಯಿಂದ ಜೆ.ಪಿ.ನಗರಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಈ ಹಣಕ್ಕೆ ಸೂಕ್ತ ದಾಖಲೆ ಹಾಜರುಪಡಿಸುವಂತೆ ಕೇಳಿದಾಗ, ಯಾವುದೇ ದಾಖಲೆ ಹಾಜರುಪಡಿಸಿಲ್ಲ. ಹೀಗಾಗಿ ಕಾರು ಮತ್ತು ಹಣ ಜಪ್ತಿ ಮಾಡಿ ರಿಷಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿನಲ್ಲಿ ದಾಖಲೆ ಇಲ್ಲದ 10 ಲಕ್ಷ ರೂ.ಗಿಂತ ಅಧಿಕ ಹಣ ಪತ್ತೆಯಾಗಿರುವುದರಿಂದ ಆದಾಯ ತೆರಿಗೆ ಇಲಾಖೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಐಟಿ ಅಧಿಕಾರಿಗಳು ಹಣದ ಮೂಲದ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಜೆ.ಪಿ.ನಗರ ಪೊಲೀಸರು 36.2 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net