ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಏಡ್ಸ್ ಸೋಂಕಿತರು

07_01_Mdy_Aids Day 1
Published on

ಮಂಡ್ಯ: 2005ರಿಂದ ಈವರೆಗೆ ಜಿಲ್ಲೆಯಲ್ಲಿ 10,159 ಜನರಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಆತಂಕ ವ್ಯಕ್ತಪಡಿಸಿದರು.

ವಿಶ್ವ ಏಡ್ಸ್ ದಿನದ ಅಂಗವಾಗಿ ನಗರದ ಮಹಿಳಾ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹದಿಹರೆಯದ ವಯಸ್ಸಿನಲ್ಲೇ ಎಚ್‌ಐವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಜಿಲ್ಲೆಯಲ್ಲಿ 8,185 ಜನರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 537 ಗರ್ಭಿಣಿಯರಿಗೆ ಚಿಕಿತ್ಸೆ ನೀಡಿದ್ದು, ಸೋಂಕಿನಿಂದ ಮುಕ್ತರಾಗಿದ್ದಾರೆ. ಅಂತೆಯೇ, 195 ಮಕ್ಕಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದರು.

20 ರಿಂದ 38 ವರ್ಷದವರಿಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವುದು ಉತ್ತಮವಾಗಿದೆ. ಕಾರಣ, ಎಚ್‌ಐವಿ ಮತ್ತು ಏಡ್ಸ್‌ಗೆ ತುತ್ತಾಗುವುದು ಈ ವಯಸ್ಸಿನವರೇ ಆಗಿದ್ದಾರೆ. ಕಾಯಿಲೆ ಅನೇಕ ರೀತಿಯಲ್ಲಿ ಬರಬಹುದು. ಸಿರಂಜ್ ಮೂಲಕ ಹರಡುವುದು, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಬರುವುದರ ಬಗ್ಗೆ ಅರಿವು ಮೂಡಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಅನಿಲ್‌ಕುಮಾರ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಗುಂಪನ್ನು ರೂಪಿಸಿ ಅವರ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಏಡ್ಸ್ ಬಗ್ಗೆ ಶಿಕ್ಷಣ ಕೊಡಿಸಲಾಗುತ್ತಿದೆ ಎಂದರು.

ಪ್ರಾಂಶುಪಾಲ ಪ್ರೊ.ನಾರಾಯಣ, ಮಿಮ್ಸ್ ಎಸ್‌ಟಿಐ ವಿಭಾಗದ ಆಪ್ತ ಸಮಾಲೋಚಕಿ ದೀಪು, ಎನ್‌ಎಸ್‌ಎಸ್ ಘಟಕಗಳ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಂ.ಕೆಂಪಮ್ಮ, ಪ್ರೊ.ರಮೇಶ್, ವಿನಾಯಕ ಇತರರಿದ್ದರು. ವಿಶ್ವ ಏಡ್ಸ್ ದಿನ ಕುರಿತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net