

ಹಳಿಯಾಳ: ಶಾಲಾ ಆವರಣದ ಪಕ್ಕದಲ್ಲಿ ಬೆಳೆದ ವಿಷಕಾರಿ ಬೀಜಗಳನ್ನು ತಿಂದು 10ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ಗುಂಡೊಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಈ ಕುರಿತು ಮಂಗಳವಾರ ಪಾಲಕರು ಹಾಗೂ ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯಂತೆ ಸೋಮವಾರ ಬೆಳಗ್ಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ರಿಂದ 3ನೇ ತರಗತಿಯ ಸುಮಾರು 10ಕ್ಕೂ ಅಧಿಕ ಮಕ್ಕಳು ಶಾಲೆ ಮುಗಿಯುವ ಮುನ್ನ ಆಟವಾಡುತ್ತ ಶಾಲೆಯ ಆವರಣದ ಪಕ್ಕದಲ್ಲಿದ್ದ ಬೆಳೆದಿದ್ದ ವಿಷಕಾರಿ ಬಳ್ಳಿಯಲ್ಲಿನ ಹಣ್ಣಿನ ಬೀಜಗಳನ್ನು ಶೇಂಗಾ ಬೀಜವೆಂದು ಭಾವಿಸಿ ತಿಂದಿದ್ದಾರೆ. ಆದರೆ, ಸಾಯಂಕಾಲದವರೆಗೆ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಆದರೆ, ರಾತ್ರಿಯಾಗುತ್ತಿದ್ದಂತೆ ವಾಂತಿ ಭೇದಿ ಕಾಣಿಸಿಕೊಂಡು ಮಕ್ಕಳು ಅಸ್ವಸ್ಥರಾಗುತ್ತಿದ್ದನ್ನು ಕಂಡ ಪಾಲಕರು ತಕ್ಷಣ ಮಕ್ಕಳನ್ನು ಪಕ್ಕದ ಕಾಳಗಿನಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಯ ನಂತರ ರಾತ್ರಿ ಹಳಿಯಾಳ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಆಸ್ಪತ್ರೆಯ ತಜ್ಞ ವೈದ್ಯ ಡಾ. ಗಣೇಶ ಅರಶಿಷಗೇರಿ ಅವರು ಅಸ್ವಸ್ಥಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಿದ್ದು, ಬಹುತೇಕ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಮೂವರು ಮಕ್ಕಳ ಚಿಕಿತ್ಸೆ ಮುಂದುವರಿದಿದ್ದು ಮುನ್ನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿಷಯ ತಿಳಿಯುತ್ತಿದ್ದಂತೆಯೇ ಸಿಪಿಐ ಸುರೇಶ ಶಿಂಗೆ, ಪಿಎಸ್‌ಐಗಳಾದ ವಿನೋದ ಎಸ್.ಕೆ., ಅಮೀನ್ ಅತ್ತಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಮಕ್ಕಳಿಂದ ಮಾಹಿತಿ ಪಡೆದರು. ಶಾಲೆ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಮಕ್ಕಳೊಂದಿಗೆ ಆಸ್ಪತ್ರೆಗೆ ಧಾವಿಸಿದ್ದು ಕಂಡು ಬಂದಿತು.