

ಹುಬ್ಬಳ್ಳಿ: ಅಧಿಕಾರಿಗಳೊಂದಿಗೆ ಸೇರಿ ಪಾಲಿಕೆ ಸದಸ್ಯರು ವಿವಿಧ ವಾರ್ಡ್‌ಗಳಲ್ಲಿ ತೆರಿಗೆ ಸಂಗ್ರಹಿಸಿದರೆ 400-500 ಕೋಟಿ ರೂ. ಆದಾಯ ಬರಲಿದೆ. ಬಂದ ಆದಾಯದಲ್ಲಿ ಅವಳಿ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುಂಬಾಲು ಬೀಳುವುದೂ ಕೂಡ ತಪ್ಪಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ತಿಳಿಸಿದರು.
ನಗರದ ಮಹಾನಗರ ಪಾಲಿಕೆ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ತೆರಿಗೆ ಸಂಗ್ರಹ ಹಾಗೂ ಆದಾಯ ಕ್ರೋಡೀಕರಣ’ ಸಭೆಯಲ್ಲಿ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ 3.38 ಲಕ್ಷ ಆಸ್ತಿಗಳಿವೆ. ಸಮರ್ಪಕವಾಗಿ ತೆರಿಗೆ ಪಾವತಿಯಾಗುತ್ತಿಲ್ಲ. ಅಕ್ರಮ-ಸಕ್ರಮ ಬಡಾವಣೆಗಳ ಜನರಿಂದ ತೆರಿಗೆ ಪಡೆದರೆ ಪಾಲಿಕೆಯ ಬೊಕ್ಕಸ ಭರ್ತಿಯಾಗಲಿದೆ. ಅಧಿಕಾರಿಗಳು ಪ್ರತಿ ವಾರ್ಡ್ ಸದಸ್ಯರಿಗೆ ಆಸ್ತಿ ತೆರಿಗೆ ಬಗ್ಗೆ ಮಾಹಿತಿ ನೀಡಬೇಕು. ವಸತಿ, ವಾಣಿಜ್ಯ ಆಸ್ತಿಗಳ ಬಗ್ಗೆ ತಿಳಿದರೆ ತೆರಿಗೆ ಸಂಗ್ರಹಿಸಲು ಅನುಕೂಲವಾಗಲಿದೆ. ತೆರಿಗೆ ಪಾವತಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ರೈಲ್ವೆ, ಹೆಸ್ಕಾಂ ಹಾಗೂ ಇತರ ಸರ್ಕಾರಿ ಸಂಸ್ಥೆಗಳಿಅದ ತೆರಿಗೆ ಸಂಗ್ರಹಿಸಬೇಕು. ರೈಲ್ವೆ ಇಲಾಖೆಯು ಹಲವು ವರ್ಷದಿಂದ ತೆರಿಗೆ ಸಂಗ್ರಹ ಮಾಡಿಲ್ಲ. ಈ ಬಗ್ಗೆ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮಾತನಾಡಿದ್ದೇನೆ. ಪಾಲಿಕೆ ವಿರೋಧ ಪಕ್ಷದವರು ಅನುದಾನ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆರಬೇಕು. ಎಲ್ಲರೂ ಸೇರಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅತಿ ಹೆಚ್ಚು ತೆರಿಗೆ ಸಂಗ್ರಹದಿಂದ ಹು-ಧಾ ಅಭಿವೃದ್ಧಿಯಾಗುತ್ತದೆ. ತೆರಿಗೆ ಸಂಗ್ರಹಿಸಲು ಏನು ಮಾಡಬೇಕು ಎಂಬುದು ತಿಳಿಸಿದ್ದು, ಅನುಷ್ಠಾನ ಮಾಡಲು ಎಲ್ಲರೂ ಶ್ರಮಿಸಬೇಕು. ತೆರಿಗೆ ಸಂಗ್ರಹಿಸಲು ಹೊರಗುತ್ತಿಗೆ ನೀಡಲು ಅವಕಾಶವಿದ್ದರೆ ಮುಂದಿನ ದಿನಗಳಲ್ಲಿ ಅದನ್ನೂ ಮಾಡಬಹುದು ಎಂದರು.
ಕಂದಾಯ ಉಪ ಆಯುಕ್ತ ವಿಶ್ವನಾಥ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಆಸ್ತಿಗಳಿವೆ, ತೆರಿಗೆ ಸಂಗ್ರಹ ಹಾಗೂ ಪಾಲಿಕೆ ತೆರಿಗೆ ಸಂಗ್ರಹಿಸಲು ಕೈಗೊಂಡ ಕ್ರಮಗಳ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಮೇಯರ್ ರಾಮಪ್ಪ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಸಭಾ ನಾಯಕ ವೀರಣ್ಣ ಸವಡಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಪಾಲಿಕೆ ವಲಯ ಆಯುಕ್ತರು, ಅಧಿಕಾರಿಗಳು ಹಾಜರಿದ್ದರು.