ಸಂಬಂಧಿಕರಿಂದಲೇ ಲೈಂಗಿಕ ದೌರ್ಜನ್ಯ ಹೆಚ್ಚು: ಮೋಹಿನಿ ಸಿದ್ದೇಗೌಡ

Mohini Siddegowda
Published on

ಚಿಕ್ಕಮಗಳೂರು: ಕೆಲವು ಪ್ರಕರಣಗಳಲ್ಲಿ ಸಂಬಂಧಿಕರಿಂದಲೇ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ಇಂಥ ಪ್ರಕರಣಗಳ ಸಂಬಂಧದ ವಿಚಾರಣೆ ಶೀಘ್ರ ಪೂರ್ಣಗೊಳಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕಸ್ತೂರಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಆಗ್ರಹಿಸಿದರು.
ಕೆಲವು ಪ್ರಕರಣಗಳಲ್ಲಿ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅಪಾಯ ಇರುವುದು ಮನೆಯಲ್ಲಿ. ಅಕ್ಕಪಕ್ಕದವರನ್ನು ನಂಬುವಂತಿಲ್ಲ. ವ್ಯವಸ್ಥೆಯೇ ಹಳಿ ತಪ್ಪುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಸ್ವಾಧಾರ್ ನಲ್ಲಿ ಸಂತ್ರಸ್ತರಿಗೆ ಆಶ್ರಯ:
ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಸಂತ್ರಸ್ತ ಬಾಲಕಿಯರು ಹಾಗೂ ಮಹಿಳೆಯರಿಗೆ ಸ್ವಾಧಾರ್ ಗೃಹದಲ್ಲಿ ಆಶ್ರಯ ನೀಡಲಾಗಿದೆ. ಕೆಲವು ಅತ್ಯಾಚಾರದ ಪ್ರಕರಣಗಳು ದಿಗ್ಭ್ರಮೆ ಮೂಡಿಸುತ್ತಿವೆ. ಸರ್ಕಾರ ಹಾಗೂ ಕಾನೂನು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ ಎಂದು ಆಗ್ರಹಿಸಿದರು. ಸ್ವಾಧಾರ್ ಕೇಂದ್ರದಲ್ಲಿ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದ ನಾಲ್ವರು ಸಂತ್ರಸ್ತರು, ಬಾಲ್ಯ ವಿವಾಹದ ಮೂವರು ಅಪ್ರಾಪ್ತೆಯರಿಗೆ ಆಶ್ರಯ ನೀಡಲಾಗಿದೆ. ಇಂತಹ ವಿಚಾರಗಳಲ್ಲಿ ಇದಕ್ಕೆಲ್ಲ ಮೊಬೈಲ್ ಕಾರಣ ಎಂದು ಹೇಳಿ ಲಘುವಾಗಿ ಪರಿಗಣಿಸುವುದು ಸೂಕ್ತವಲ್ಲ. ಇದೊಂದು ಗಂಭೀರ ವಿಚಾರ ಎಂದು ಹೇಳಿದರು.

ಕೌಟುಂಬಿಕ ಕಲಹದ 80 ಪ್ರಕರಣ:
ಕಳೆದ ಒಂದು ವರ್ಷದಲ್ಲಿ ಸಾಂತ್ವನ ಕೇಂದ್ರಕ್ಕೆ ಬಂದ 120 ಪ್ರಕರಣಗಳಲ್ಲಿ ಬರೋಬ್ಬರಿ 80 ಪ್ರಕರಣಗಳು ಕೌಟುಂಬಿಕ ಕಲಹದ್ದೇ ಆಗಿವೆ. ಒಟ್ಟು ಪ್ರಕರಣದಲ್ಲಿ 92 ಪೂರ್ಣಗೊಂಡಿದ್ದು, 28 ಬಾಕಿ ಉಳಿದಿವೆ. ವರದಕ್ಷಿಣೆಯ 3, ಬಹುಪತ್ನಿತ್ವದ 5, ಲೈಂಗಿಕ ಕಿರುಕುಳದ 1, ಇತರೆ 20, ಅನೈತಿಕ ಸಂಬಂಧದ 11 ಪ್ರಕರಣಗಳು ಸೇರಿವೆ. 69 ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, 6 ಪ್ರಕರಣಗಳನ್ನು ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. 17 ಪ್ರಕರಣಗಳು ದೂರು ಬಂದ ವೇಳೆಯೇ ಕೇಂದ್ರದ ಹೊರಗೆ ಇತ್ಯರ್ಥವಾದ್ದರಿಂದ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.
ಒಂದು ವರ್ಷದಲ್ಲಿ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ದಾಖಲಾದ 66 ಪ್ರಕರಣಗಳಲ್ಲಿ 44 ಮುಕ್ತಾಯಗೊಂಡಿವೆ. ಇವುಗಳಲ್ಲಿ ವರದಕ್ಷಿಣೆ 5, ಮಹಿಳಾ ದೌರ್ಜನ್ಯ 1, ದಾಂಪತ್ಯದಲ್ಲಿ ವಿರಸ 20, ಅತ್ತೆ, ಮಾವ, ನಾದಿನಿ, ಪೋಷಕರ ಮಧ್ಯೆ ಪ್ರವೇಶದ 7, ಬಹುಪತ್ನಿತ್ವ 10, ಮದ್ಯ ವ್ಯಸನಿಗಳಿಂದ ಕೌಟುಂಬಿಕ ಸಮಸ್ಯೆ 12, ಪ್ರೇಮ ಪ್ರಕರಣ 3 ಹಾಗೂ 8 ಇತರ ಪ್ರಕರಣಗಳು ಸೇರಿವೆ ಎಂದರು.

ಸ್ವಾಧಾರ್ ನಲ್ಲಿ 32 ಫಲಾನುಭವಿಗಳು:
ಸ್ವಾಧಾರ್ ಗೃಹಕ್ಕೆ 5 ತಿಂಗಳಲ್ಲಿ 48 ಪ್ರಕರಣಗಳು ದಾಖಲಾಗಿದ್ದು, ಆಶ್ರಯ ಪಡೆದಿದ್ದ 16 ಫಲಾನುಭವಿಗಳನ್ನು ಕೇಂದ್ರದಿಂದ ಕಳುಹಿಸಲಾಗಿದೆ. ಪ್ರಸ್ತುತ ಆಶ್ರಯದಲ್ಲಿರುವ 32 ಮಂದಿಯಲ್ಲಿ 12 ಮಹಿಳೆಯರು, 20 ಮಕ್ಕಳು ಸೇರಿದ್ದಾರೆ. ಇದುವರೆಗೆ ಒಟ್ಟು 7 ಕೌಟುಂಬಿಕ ಸಮಸ್ಯೆ, 4 ಪ್ರೇಮ ಪ್ರಕರಣ, 4 ಕಾಣೆ ಪ್ರಕರಣ, 1 ನಿರಾಶ್ರಿತ, 3 ಬಾಲ್ಯ ವಿವಾಹ, 6 ಪಾಲನೆ-ಪೋಷಣೆ, 4 ಪೋಕ್ಸೋ, 1 ಭಿಕ್ಷಾಟನೆ, 2 ಇತರ ಪ್ರಕರಣಗಳು ಬಂದಿವೆ ಎಂದು ಅವರು ಮಾಹಿತಿ ನೀಡಿದರು.

10 ಲಕ್ಷ ರೂ. ಅನುದಾನ ಬಿಡುಗಡೆ ಬಾಕಿ:
ಕೇಂದ್ರ ಸರ್ಕಾರದ ನೆರವಿನಲ್ಲಿ ನಡೆಯುತ್ತಿರುವ ಸ್ವಾಧಾರ್ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗದೆ ಸಮಸ್ಯೆಯಾಗಿದೆ. ಆರಂಭದಲ್ಲಿ ಒದಗಿಸಿದ 6 ಲಕ್ಷ ರೂ. ಹೊರತಾಗಿ ಹಣ ಬಿಡುಗಡೆಯಾಗಿಲ್ಲ. 10 ಲಕ್ಷ ರೂ. ಬಿಡುಗಡೆಗೆ ಬಾಕಿಯಾಗಿದೆ. ಸಾಲ ಮಾಡಿ ಕೇಂದ್ರವನ್ನು ನಡೆಸುವ ಪರಿಸ್ಥಿತಿ ಇದೆ. ಸಂಸದರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಗಮನ ಹರಿಸಿ ಅನುದಾನ ಬಿಡುಗಡೆ ಮಾಡಿಸಬೇಕೆಂದು ಅವರು ಮನವಿ ಮಾಡಿದರು.

ನೈತಿಕ ಮಟ್ಟ ಕುಸಿಯುತ್ತಿದೆ:
ಕೆಲವು ಪ್ರಕರಣಗಳಲ್ಲಿ ಮನುಷ್ಯನ ನೈತಿಕ ಮಟ್ಟ ಕುಸಿಯುತ್ತಿರುವುದು ಸ್ಪಷ್ಟವಾಗಿದೆ. ತಾಲೂಕಿನ ಗ್ರಾಮದ ಕುಲಕಸುಬು ಅವಲಂಬಿತ 40ರ ಹರೆಯದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಲಹೆಯಂತೆ ನಗರದ ತನ್ನದೇ ಕಸುಬಿನ ಪತ್ನಿ, ಮಕ್ಕಳೊಂದಿಗನ ಮನೆಯಲ್ಲಿ ಆಶ್ರಯ ಪಡೆದು ಕಸುಬು ಮುಂದುವರಿಸಿದ. ಆತನ ಪತ್ನಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಹಳ್ಳಿಯಲ್ಲಿದ್ದಳು. ಕಾಲಕ್ರಮೇಣ ಈತ ಆಶ್ರಯಧಾತನ 60ರ ಪತ್ನಿಯ ಸಂಬಂಧ ಬೆಳೆಸಿಕೊಂಡ. ಅನೈತಿಕ ಸಂಬಂಧದ ವಿಚಾರ ಗೊತ್ತಾಗಿ ಬೇಸತ್ತ ಆಶ್ರಯಧಾತ ತನ್ನ ಪತ್ನಿ, ಇಬ್ಬರು ಮಕ್ಕಳನ್ನು ನೀನೇ ಸಲಹು ಎಂದು ಹೇಳಿ ಮನೆ ಬಿಟ್ಟು ಹೋಗಿದ್ದಾನೆ. ಆರೋಪಿ ಮಾತ್ರ ಹೆಂಡತಿಯನ್ನು ಬಿಟ್ಟರೂ ಅಕ್ರಮ ಸಂಬಂಧದ ಮಹಿಳೆಯನ್ನು ಬಿಡುವುದಿಲ್ಲ ಎನುತ್ತಿದ್ದಾನೆ. ಇದೀಗ ಆತನ ಪತ್ನಿ ಸ್ವಾಧಾರ್ ಕೇಂದ್ರಕ್ಕೆ ದೂರು ತಂದಿದ್ದಾಳೆ ಎಂದು ಅವರು ತಿಳಿಸಿದರು.

ಮದ್ಯ ವ್ಯಸನಿ ವಿಕೃತಿ:
ಮತ್ತೊಂದು ಪ್ರಕರಣದಲ್ಲಿ ಪತ್ನಿಗೆ ಹಿಂಸೆ ಕೊಟ್ಟು ಸಾಲ ತೆಗೆಸಿಕೊಂಡು ದಿನವಿಡೀ ಮದ್ಯ ಸೇವಿಸುತ್ತಿದ್ದ. ಆತನ ಪತ್ನಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಆತನನ್ನು ಕರೆದು ಬುದ್ಧಿ ಹೇಳಿದಾಗ, ಏನು ಬೇಕಾದರೂ ಹೇಳಿ, ಕೇಳುತ್ತೇನೆ. ಮದ್ಯ ಸೇವನೆ ಬಿಡಲು ಆಗದು ಎನ್ನುತ್ತಿದ್ದಾನೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಅಧ್ಯಕ್ಷೆ ಯಮುನಾ ಸಿ. ಶೆಟ್ಟಿ, ಉಪಾಧ್ಯಕ್ಷೆ ಯಶೋದಾ ಲಕ್ಷ್ಮಣ ಗೌಡ, ಸಹಕಾರ್ಯದರ್ಶಿ ರೀನಾ ಸುಜೇಂದ್ರ, ಸದಸ್ಯೆ ಎನ್.ಜಿ.ಪಾರ್ವತಿ, ವಕೀಲೆ ಅರುಂಧತಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net