ಕಳೆದ 2 ಬಾರಿಗಿಂತ ಹೆಚ್ಚಿನ ಸೀಟು : ಬಿವೈಆರ್ ವಿಶ್ವಾಸ

byr
ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
Published on

ಶಿವಮೊಗ್ಗ: ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಏನೇ ಸಾಹಸ ಮಾಡಿದರೂ ಕಳೆದ ಎರಡು ಬಾರಿಗಿಂತಲೂ ಹೆಚ್ಚಿನ ಸೀಟುಗಳೊಂದಿಗೆ ಎನ್‌ಡಿಎ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಸನಾತನ ಧರ್ಮದ ಕುರಿತ ಹೇಳಿಕೆ, ಭಾರತ-ಇಂಡಿಯಾ ಕುರಿತು ಪ್ರತಿಪಕ್ಷಗಳ ಹೇಳಿಕೆ ಯಾವುದೇ ಫಲ ನೀಡುವುದಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಜಿ-20 ಶೃಂಗ ಸಭೆಯ ಗಣ್ಯರನ್ನು ಔತಣಕೂಟಕ್ಕೆ ಆಹ್ವಾನಿಸುವ ರಾಷ್ಟ್ರಪತಿ ಆಮಂತ್ರಣ ಪತ್ರಿಕೆಯಲ್ಲಿ ರಿಪಬ್ಲಿಕ್ ಆಫ್ ಭಾರತ್ ಎಂದು ಮುದ್ರಿಸಿರುವುದನ್ನೇ ಪ್ರತಿಪಕ್ಷ ಮೈತ್ರಿಕೂಟ ದೊಡ್ಡ ಪ್ರಮಾದವೆಂಬಂತೆ ಬಿಂಬಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಹೇಳಿಕೆಯನ್ನು ಬೆಂಬಲಿಸುವ ರೀತಿಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿವೈಆರ್, ಅತಿ ಬುದ್ಧಿವಂತರು ಮಾತ್ರ ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.
ಉದಯನಿಧಿ ಮಾರನ್ ಅವರ ತಾಯಿ ದೇವರ ಪರಮಭಕ್ತೆಯಾಗಿದ್ದು, ಪ್ರತಿ ದಿನ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ ಎಂಬುದನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಎನ್‌ಡಿಎ ಕೂಟಕ್ಕೆ ವ್ಯಕ್ತವಾಗುತ್ತಿರುವ ಜನಬೆಂಬಲ ಕಂಡು ಮಾರನ್ ಕಂಗೆಟ್ಟು ಈ ರೀತಿ ಹೇಳಿಕೆ ನೀಡಿರಬಹುದು ಎಂದರು.
ಬಿಜೆಪಿ ಎಂದು ಧರ್ಮದ ಆಧಾರದಲ್ಲಿ ರಾಜಕೀಯ ಮಾಡಿಲ್ಲ. ರಾಮಮಂದಿರ ಪ್ರತಿಯೊಬ್ಬ ಹಿಂದುವಿನ ಕನಸು. ನಮ್ಮ ಪಕ್ಷದ ಪ್ರಮುಖ ಆಶಯವೇ ಅದಾಗಿತ್ತು. ಅದಕ್ಕಾಗಿ ಅನೇಕರು ತ್ಯಾಗ ಮಾಡಿದ್ದಾರೆ. ನಾವು ಅದನ್ನು ಚುನಾವಣೆಗೆ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net