

ಗದಗ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೀಡಾಗಿದ ಮನೆಗಳ ಫಲಾನುಭವಿಗಳಿಗೆ ಎಸ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಒಟ್ಟು 65.95 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆಯಿಂದ ಜಿಲ್ಲೆಯಲ್ಲಿ 1940 ಮನೆಗಳು ಹಾಳಾಗಿದ್ದು, ಪ್ರತಿ ಮನೆಗೆ 5200 ರೂ. ಪರಿಹಾರ ನಿಗದಿಪಡಿಸಲಾಗಿದೆ. ಪರಿಹಾರ ವಿತರಣೆ ಕಾರ್ಯ ಮುಂದುವರಿದಿದೆ. ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿ ಫಲಾನುಭವಿಗೆ ತಲಾ 50 ಸಾವಿರ ರೂ. ಹೆಚ್ಚುವರಿ ಪರಿಹಾರ ನೀಡಲು ತೀರ್ವನಿಸಿದ್ದು, ಇದಕ್ಕೆ 9 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಫಲಾನುಭವಿಗಳಿಗೆ ಹಣ ಶೀಘ್ರದಲ್ಲಿ ಸಂದಾಯವಾಗಲಿದೆ. ಮಳೆಯಿಂದ ಜಿಲ್ಲೆಯಲ್ಲಿ 60,902 ರೈತರ 1,65,906 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದ್ದು, ಇದಕ್ಕಾಗಿ 57.45 ಕೋಟಿ ರೂ. ಪರಿಹಾರ ವಿತರಿಸಲಾಗಿದೆ’ ಎಂದರು.
ಮೈಮರೆಯಬೇಡಿ: ಕೋವಿಡ್-19 ಎರಡನೇ ಅಲೆ ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂದು ತಜ್ಞರು ವರದಿ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸಂಪುಟ ಉಪಸಮಿತಿ ರಚಿಸಿದ್ದಾರೆ. ಆರೋಗ್ಯ ಸಚಿವ ಡಾ. ಸುಧಾಕರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸುರೇಶಕುಮಾರ ಮತ್ತು ನಾನು ಸಮಿತಿಯಲ್ಲಿದ್ದೇವೆ. ಕೋವಿಡ್ ನಿಯಂತ್ರಿಸಲು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದು, ಅಗತ್ಯ ವೈದ್ಯಕೀಯ ಪರಿಕರ ಖರೀದಿಸಲು ಹಣ ನೀಡಲಾಗಿದೆ. ಕರೊನಾದಿಂದ ದೂರವಿರಲು ಎಲ್ಲರೂ ಸುರಕ್ಷೆ ಕ್ರಮಗಳನ್ನು ಅನುಸರಿಸಬೇಕು. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. 50 ದಿನಗಳಿಂದ ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ. ಆದರೆ, ಸೋಂಕು ಸಂಪೂರ್ಣ ನಿಮೂಲನೆಯಾಗಿಲ್ಲ. ಜನರು ಮೈಮರೆಯಬಾರದು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ ಇತರರಿದ್ದರು.
ಬಿಜೆಪಿ ಕಾರ್ಯಾಲಯ ನಿರ್ಮಾಣ: ಗದಗ ಜಿಲ್ಲಾಡಳಿತ ಭವನ ಎದುರಿನ ಪರಿಸರ ಲೇಔಟ್ನಲ್ಲಿ 12,000 ಚದರ ಅಡಿ ಜಾಗದಲ್ಲಿ ಬಿಜೆಪಿ ಕಾರ್ಯಾಲಯ ಬೃಹತ್ ಕಟ್ಟಡ ನಿರ್ವಣಕ್ಕೆ ಡಿ. 17ರಂದು ಮಧ್ಯಾಹ್ನ 4ಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ್ ಭೂಮಿ ಪೂಜೆ ನೆರವೇರಿಸುವರು. ಈ ಕಟ್ಟಡ 15 ತಿಂಗಳಲ್ಲಿ ನಿರ್ವಣವಾಗಲಿದೆ. ನಾನು ಪಕ್ಷದ ಜಿಲ್ಲಾಧ್ಯಕ್ಷ ಆಗಿದ್ದಾಗ ಜಾಗ ಖರೀದಿಸಲಾಗಿತ್ತು. ಈಗ ಜಿಲ್ಲಾ ಉಸ್ತುವಾರಿ ಸಚಿವನಾಗಿರುವಾಗ ಕಾರ್ಯಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.
ಬಸ್ ನಿಲ್ದಾಣ ಶೀಘ್ರ ಉದ್ಘಾಟನೆ: ಗದಗ ನಗರದ ನವೀಕೃತ ಹಳೇ ಬಸ್ ನಿಲ್ದಾಣವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ರ್ಚಚಿಸಿ ಉದ್ಘಾಟನೆ ದಿನಾಂಕ ನಿಗದಿಪಡಿಸಲಾಗುವುದು. ಆಕಸ್ಮಾತ್ ಸಾರಿಗೆ ಸಚಿವರ ದಿನಾಂಕ ಲಭ್ಯವಾಗದಿದ್ದಲ್ಲಿ ವಾರದೊಳಗೆ ನಾನೇ ಬಸ್ ನಿಲ್ದಾಣವನ್ನು ಉದ್ಘಾಟಿಸುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು. ನವೀಕೃತಗೊಂಡಿರುವ ಹಳೇ ಬಸ್ ನಿಲ್ದಾಣಕ್ಕೆ ಸರ್ಕಾರವು ಪಂಡಿತ ಪುಟ್ಟರಾಜ ಗವಾಯಿ ಹೆಸರು ಇಡುವ ಮೂಲಕ ಅಪಾರ ಭಕ್ತರ ಆಶಯವನ್ನು ಈಡೇರಿಸಿದೆ ಎಂದು ಅವರು ಹೇಳಿದರು. ಹಟ್ಟಿ ಗೋಲ್ಡ್ ಮೈನ್ಸ್ ವತಿಯಿಂದ ಜಿಲ್ಲೆಯ ಮುಂಡರಗಿ, ರೋಣ, ಶಿರಹಟ್ಟಿ ಮತ್ತು ನರಗುಂದ ತಾಲೂಕಿಗೆ ತಲಾ 25 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಐಸಿಯು ಸೌಲಭ್ಯವುಳ್ಳ ಸುಸಜ್ಜಿತ ಆಂಬುಲೆನ್ಸ್ ಖರೀದಿಸಲು 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಿ.ಸಿ. ಪಾಟೀಲ ವಿವರಿಸಿದರು.