

ಕಾಗವಾಡ: ವಿಶ್ವದಲ್ಲಿಯೇ ಬಿಜೆಪಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ್ದು, ಕಾಗವಾಡ ಮಂಡಲ ವತಿಯಿಂದ ಪ್ರತಿ ಬೂತ್‌ನಿಂದ ಮುನ್ನೂರು ಜನರ ಸದಸ್ಯತ್ವ ನೋಂದಣಿ ಮಾಡಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಬಲಪಡಿಸೋಣ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುವ ಉದ್ಯಮಿ ಬಾಳಾಸಾಹೇಬ ಧೋತ್ರೆ ದಂಪತಿಯ ಬಿಜೆಪಿ ಸೇರ್ಪಡೆ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನರೇಂದ್ರ ಮೋದಿ ಕಾರ್ಯಗಳನ್ನು ಮೆಚ್ಚಿ ಯುವ ದಲಿತ ಉದ್ಯಮಿ ಬಾಳಾಸಾಹೇಬ ಧೋತ್ರೆ ದಂಪತಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಕಾಗವಾಡ ಮಂಡಲ ಬಲಿಷ್ಠವಾಗಲಿದೆ. ಕಾಂಗ್ರೆಸ್ ಪದೇ ಪದೆ ಬಿಜೆಪಿಗೆ ದಲಿತ ವಿರೋಧಿ ಪಟ್ಟ ಕಟ್ಟುತ್ತಿದ್ದು, ಸಾವಿರಾರು ದಲಿತರು ಬಿಜೆಪಿಯಲ್ಲಿದ್ದಾರೆ. ಅವರು ನಮ್ಮ ಪರವಾಗಿದ್ದಾರೆ ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜೀಗೋಳ ಮಾತನಾಡಿ, ಬಾಳಾಸಾಹೇಬ ಧೋತ್ರೆ ಅವರನ್ನು ಬಿಜೆಪಿ ಕಾಗವಾಡ ಮಂಡಲದ ಎಸ್ಸಿ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದರು.
ಮುಖಂಡರಾದ ನಿಂಗಪ್ಪ ಖೋಖಲೆ, ತಮ್ಮಣ್ಣ ಪಾರಶೆಟ್ಟಿ, ಶಿವಾನಂದ ಪಾಟೀಲ, ಅಮೃತ ಕುಲಕರ್ಣಿ, ಅಭಯ ಅಕಿವಾಟೆ, ಮಹಾವೀರ ಕಾತ್ರಾಳೆ, ಭರ್ಮಣ್ಣ ಚೌಗುಲೆ, ದಿವ್ಯಾ ಧೋತ್ರೆ, ಶಿವಾನಂದ ನವಿನಾಳೆ, ಉತ್ಕರ್ಷ ಪಾಟೀಲ, ವಿದ್ಯಾಧರ ಮೌರ್ಯ, ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.