ಪಿಕಾರ್ಡ್ ಬ್ಯಾಂಕ್‌ನಿಂದ ಹೆಚ್ಚು ಹಣ ವಸೂಲಿ ತಂತ್ರ

picard
ಕೊಪ್ಪ ತಾಲೂಕು ರೈತ ಹೋರಾಟ ಸಮಿತಿಯಿಂದ ಶಾಸಕರ ಆಪ್ತ ಕಾರ್ಯದರ್ಶಿ ರಾಜೇಂದ್ರ ಮೂಲಕ ಟಿ.ಡಿ.ರಾಜೇಗೌಡಗೆ ಮನವಿ ಸಲ್ಲಿಸಲಾಯಿತು. ವಿಜೇಂದ್ರ, ಕೇಶವ್ ಕರ್ಕಿ, ವೆಂಕಟೇಶ್ ಇತರರಿದ್ದರು.
Published on

ಕೊಪ್ಪ: ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕ್ ಆಡಳಿತ ರೈತರ ಸಾಲ ಪ್ರಕರಣವನ್ನು ಕೋರ್ಟ್‌ಗೆ ವರ್ಗಾಯಿಸಿ ಐದುಪಟ್ಟು ಹೆಚ್ಚು ಹಣ ವಸೂಲಿ ಮಾಡಲು ಮುಂದಾಗಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ವಿಜೇಂದ್ರ ಎಜಿ. ಕಟ್ಟೆ ಆರೋಪಿಸಿದರು.

ಭೂ ಅಭಿವೃದ್ಧಿ ಬ್ಯಾಂಕ್‌ನಲ್ಲಿ 450ಕ್ಕೂ ಹೆಚ್ಚು ರೈತರು ಸಾಲ ಪಡೆದುಕೊಂಡಿದ್ದಾರೆ. ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಬ್ಯಾಂಕ್ ಆಡಳಿತ ರೈತರ ಅಹವಾಲುಗಳನ್ನೂ ಕೇಳಲಿಲ್ಲ. ಈಗ ಕೋರ್ಟ್‌ಗೆ ವರ್ಗಾಯಿಸಿ ತಿಂಗಳಿಗೆ ನಾಲ್ಕೈದು ಬಾರಿ ಕೋರ್ಟ್‌ಗೆ ರೈತರನ್ನು ಅಲೆಯುವಂತೆ ಮಾಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಡಕೆ ಎಲೆಚುಕ್ಕೆ ರೋಗ, ತುಂಡೆ ರೋಗ, ಹಳದಿ ರೋಗಗಳು ರೈತರನ್ನು ಕಾಡುತ್ತಿವೆ. ಕೃಷಿಯಲ್ಲಿ ಆದಾಯ ಬರುತ್ತಿಲ್ಲ. ರೈತರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಸಮಸ್ಯೆ ಪರಿಹರಿಸಬೇಕಾಗಿದೆ. ಇದಕ್ಕಾಗಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಶೀಘ್ರದಲ್ಲಿ ಸಮಸ್ಯೆ ಬಗೆರಿಸದೆ ಇದ್ದಲ್ಲಿ ಪಿಕಾರ್ಡ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಉಪಾಧ್ಯಕ್ಷ ಕೇಶವ್ ಕರ್ಕಿ, ಕಾರ್ಯದರ್ಶಿ ಪ್ರಮೋದ್, ವೆಂಕಟೇಶ್ ಸಿಗದಾಳು, ಸದಸ್ಯರಾದ ಬಿ.ಬಿ.ರಮೇಶ್, ನಾಗರಾಜ್ ಭಟ್, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net