

ಸಚಿವ ಮಧುಬಂಗಾರಪ್ಪ ಮಾಹಿತಿ | ಉತ್ತಮ ಗ್ರಂಥಪಾಲಕರಿಗೆ ಪ್ರಶಸ್ತಿ ಪ್ರದಾನ
ವಿಜಯವಾಣಿ ಸುದ್ದಿಜಾಲ ತುಮಕೂರು
ನಮ್ಮ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಗ್ರಂಥಾಲಯ ಒಳಗೊಂಡಿದ್ದು, ರಾಜ್ಯದಲ್ಲಿ 1,312 ಗ್ರಂಥಾಲಯಗಳಿವೆ ಎಂದು ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಭಾರತದ ಗ್ರಂಥಾಲಯ ವಿಜ್ಞಾನ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್. ರಂಗನಾಥನ್ ಅವರ 132ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಗ್ರಂಥಾಲಯಗಳ ಪ್ರಯೋಜನ ಪಡೆಯಬೇಕು. ಜತೆಗೆ ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಕೇಶವ ಮಾತನಾಡಿ, ಪುಸ್ತಕಗಳು ಜೀವನದ ಅವಿಭಾಜ್ಯ ಅಂಗವಾಗಿದೆ. ಸಾಹಿತಿ, ಲೇಖಕರು, ಬರಹಗಾರರು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿರುವ ಲೇಖನಗಳನ್ನು ಓದಲು ಮುಂದಾಗಬೇಕು. ಪುಸ್ತಕಗಳು ವೈಯಕ್ತಿಕ ಬೆಳವಣಿಗೆ, ಮಾನಸಿಕ ಆರೋಗ್ಯವೃದ್ಧಿ ಮಾನಸಿಕ ಒತ್ತಡದಿಂದ ಹೊರಗೆ
ಬರಲು ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಲು ಕಾರಣವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಎಂ.ಕನಗವಲ್ಲಿ, ಬೆಂಗಳೂರು ದಕ್ಷಿಣ ವಲಯ ಗ್ರಂಥಾಲಯ ಉಪನಿರ್ದೇಶಕಿ ಸರಸ್ವತಿ, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ದಿವಾಕರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಪ್ರಶಸ್ತಿ ಪುರಸತರಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ
ಸ್ಪರ್ಧಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸತರು: ಬಳ್ಳಾರಿ ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರ ಕಚೇರಿ ಮುಖ್ಯ ಗ್ರಂಥಾಲಯಾಧಿಕಾರಿ ಬಿ.ಕೆ.ಲಕ್ಷ್ಮೀಕಿರಣ್, ಗ್ರಂಥಪಾಲಕರಾದ ತುಮಕೂರು ನಗರ ಕೇಂದ್ರ ಗ್ರಂಥಾಲಯದ ಎಚ್.ಡಿ.ಬಸವರಾಜು, ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಬಿ.ನಮಿತಾ, ಸಹಾಯಕ ಗ್ರಂಥಪಾಲಕ ಬೆಂಗಳೂರು ಉತ್ತರ ವಲಯ ನಗರ ಕೇಂದ್ರ ಗ್ರಂಥಾಲಯದ ಎಲ್.ಲಕ್ಷ್ಮೀಕಾಂತ್, ಕೋಲಾರ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ಎಸ್.ಎನ್.ಹೇಮಾವತಿ, ಬೆಂಗಳೂರು ದಕ್ಷಿಣ ವಲಯ ನಗರ ಕೇಂದ್ರದ ಎಂ.ಬಿ.ಲೋಕೇಶ್, ಬೆಂಗಳೂರು ಪಶ್ಚಿಮ ವಲಯ ನಗರ ಕೇಂದ್ರದ ಪಿ.ಜಲಜ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಶಾಖೆಯ ಆರ್.ಮಂಜುನಾಥ್, ಮೈಸೂರು ಜಿಲ್ಲಾ ಕೇಂದ್ರ ಗ್ರಂಥಾಲಯ ಎಚ್.ಡಿ.ಕೋಟೆ ಶಾಖೆಯ ಪರಮೇಶ್, ಬೆಂಗಳೂರು ಪಶ್ಚಿಮ ವಲಯ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕಿ ಕುಸುಮಾವತಿಗೆ "ಉತ್ತಮ ಗ್ರಂಥಪಾಲಕ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಬಂಧ ಸ್ಪರ್ಧೆ ವಿಜೇತರು: ಗ್ರಂಥಪಾಲಕರ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಆರ್ಯನ್ ಪ್ರೌಢಶಾಲೆಯ ಬಿ.ಜಿ.ಯಶಸ್ವಿನಿ ಪ್ರಥಮ ಬಹುಮಾನ, ಎಂಪ್ರೆಸ್ ಪ್ರೌಢಶಾಲೆಯ ಎಚ್.ಆರ್.ಉಮಾ ದ್ವೀತಿಯ, ಆರ್ಯನ್ ಪ್ರೌಢಶಾಲೆಯ ಮುಸ್ಕಾನ್ ತೃತೀಯ ಬಹುಮಾನ ಗಳಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂಪ್ರೆಸ್ ಪ್ರೌಢಶಾಲೆಯ ಎಚ್.ಆರ್.ಉಮಾ ಪ್ರಥಮ, ಭಾರತ್ ಮಾತಾ ಶಾಲೆಯ ಟಿ.ಡಿ.ದಿವ್ಯ ದ್ವೀತಿಯ, ಬಾಪೂಜಿ ಪ್ರೌಢಶಾಲೆಯ ಕೆ.ಎನ್.ಬಸವರಾಜು ತೃತೀಯ ಬಹುಮಾನ ಪಡೆದುಕೊಂಡರು. ಗಾಯನ ಸ್ಪರ್ಧೆಯಲ್ಲಿ ಶ್ರೀ ವಾಲ್ಮಿಕಿ ಸನಿವಾಸ ಪ್ರೌಢಶಾಲೆಯ ಗಂಗೋತ್ರಿ ಪ್ರಥಮ, ಭಾರತ್ ಮಾತಾ ಶಾಲೆಯ ಟಿ.ಡಿ.ದಿವ್ಯ ದ್ವೀತಿಯ ಹಾಗೂ ಬಾಪೂಜಿ ಪ್ರೌಢಶಾಲೆಯ ಯದುನಂದನ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು. ಚಿತ್ರಕಲಾ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಫೈಸಲ್ ಖಾನ್ ಪ್ರಥಮ, ಗುರುಕುಲ ಶಾಲೆಯ ಕೆ.ಎಂ.ವೇದಾಂತ್ ದ್ವೀತಿಯ, ಮಾರುತಿ ವಿದ್ಯಾಕೇಂದ್ರದ ಎಚ್.ಆರ್.ಅನುಷ್ಕಾ ತೃತೀಯ ಬಹುಮಾನ ಪಡೆದರು.