ಹಳ್ಳಿಗಳಲ್ಲೇ ಹೆಚ್ಚು ಸೋಂಕು!

RON-Kovid Story Pho
Published on

ರೋಣ: ಕರೊನಾ ಸೋಂಕು ತಾಲೂಕಿನ ಪಟ್ಟಣ ಪ್ರದೇಶಗಳಿಗಿಂತ ಅಧಿಕವಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಹರಡಿದೆ. ವಲಸೆ ಹೋಗಿ ಬಂದವರಿಂದಲೇ ಅಧಿಕ ಪ್ರಮಾಣದಲ್ಲಿ ಸೋಂಕು ಹರಡಿದ್ದು, ವಲಸಿಗರು ವಾಪಸ್ ಬಂದಾಗ ತಾಲೂಕು ಟಾಸ್ಕ್​ಪೋರ್ಸ್ ಸಮಿತಿ ಅವರ ಮೇಲೆ ನಿಗಾ ವಹಿಸದೆ ಇರುವುದೇ ಸೋಂಕು ಹೆಚ್ಚಾಗಲು ಕಾರಣವಾಗಿದೆ.

ತಾಲೂಕಿನ ಒಟ್ಟು 52 ಗ್ರಾಮಗಳ ಪೈಕಿ 47 ಗ್ರಾಮಗಳಲ್ಲಿ 1437 ಜನರಿಗೆ ಈಗಾಗಲೇ ಸೋಂಕು ಕಾಣಿಸಿಕೊಂಡಿದೆ. ತಾಲೂಕಿನ ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲಿಯೂ ಕೆಮ್ಮು, ನೆಗಡಿ, ಜ್ವರದಿಂದ ಒಬ್ಬರಾದರೂ ಬಳಲುತ್ತಿದ್ದಾರೆ. ಇವರ್ಯಾರು ಕರೊನಾ ಪರೀಕ್ಷೆಗೆ ಮುಂದಾಗಿಲ್ಲ. ಸ್ಥಳೀಯ ಔಷಧ ಅಂಗಡಿಗಳಲ್ಲಿ ಮಾತ್ರೆ ತಗೆದುಕೊಳ್ಳುತ್ತಾರೆ. ತೀವ್ರ ತರಹದ ತೊಂದರೆಯಾದಾಗ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಆಗ ಟೆಸ್ಟ್ ಮಾಡಿದಾಗ ಪಾಸಿಟಿವ್ ಬರುತ್ತದೆ. ಅಷ್ಟರಲ್ಲಿ ಪಾಸಿಟಿವ್ ಬಂದವರ ಸ್ಥಿತಿ ಗಂಭೀರವಾಗಿರುತ್ತದೆ.

ಸೋಂಕು ಕಾಣಿಸಿಕೊಂಡ ಗ್ರಾಮಗಳು: ಸವಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಎಲ್ಲ 8 ಗ್ರಾಮಗಳಲ್ಲಿಯೂ ಸೋಂಕಿತರಿದ್ದಾರೆ. ಬೆಳವಣಿಕಿ ಪಿಎಚ್​ಸಿಯ 5 ಗ್ರಾಮದಲ್ಲಿ, ಅಬ್ಬಿಗೇರಿ ಪಿಎಚ್​ಸಿಯ ನಾಲ್ಕು ಗ್ರಾಮ, ಯಾವಗಲ್ ಪಿಎಚ್​ಸಿಯ ಯಾವಗಲ್ ಗ್ರಾಮ, ಹಿರೇಹಾಳ ಪಿಎಚ್​ಸಿಯ 12 ಗ್ರಾಮಗಳಲ್ಲಿ ಯರೇಕುರಬನಾಳ, ಹೊನ್ನಿಗನೂರ ಗ್ರಾಮ ಹೊರತುಪಡಿಸಿ 10 ಗ್ರಾಮಗಳಲ್ಲಿ ಸೋಂಕಿತರಿದ್ದಾರೆ. ಹೊಳೆಆಲೂರ ಪಿಎಚ್​ಸಿ 22 ಗ್ರಾಮಗಳಲ್ಲಿ ರ್ಕಕಟ್ಟಿ, ಮೇಗೂರ, ಗುಳಗುಂದಿ ಗ್ರಾಮಗಳನ್ನು ಹೊರತುಪಡಿಸಿ 19 ಗ್ರಾಮಗಳಲ್ಲಿ ಕರೊನಾ ಸೋಂಕಿತರಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಕರೊನಾ ಲಕ್ಷಣ ಕಂಡುಬಂದ ತಕ್ಷಣ ಪರೀಕ್ಷೆ ಟೆಸ್ಟ್ ಮಾಡಿಸಿಕೊಂಡರೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಸೋಂಕು ಬೇಗ ಗೊತ್ತಾದಷ್ಟು ಒಳ್ಳೆಯದು. ಆದರೆ, ಹಳ್ಳಿಗಳಲ್ಲಿ ಮಾತ್ರ ಈ ಬಗ್ಗೆ ಜಾಗೃತಿ ಇಲ್ಲ. ರೋಗಿ ನಿತ್ರಾಣ ಸ್ಥಿತಿಗೆ ಬಂದ ಮೇಲೆ ಚಿಕಿತ್ಸೆಗೆ ಮುಂದಾಗುತ್ತಾರೆ. ಆಗ ಕೈಮೀರಿ ಹೋಗಿರುತ್ತದೆ.| ಡಾ ಎಚ್.ಎಲ್. ಗಿರಡ್ಡಿ, ರೋಣ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಎರಡನೇ ಅಲೆಯಲ್ಲಿ ಹಳ್ಳಿಗಳಲ್ಲಿ ವ್ಯಾಪಕವಾಗಿ ಕರೊನಾ ಸೋಂಕು ಹಬ್ಬಿದೆ. ಕೇವಲ ಪಟ್ಟಣ ಪ್ರದೇಶಕ್ಕೆ ಸೀಮಿತವಾಗಿರುವ ತಾಲೂಕು ಟಾಸ್ಕ್​ಫೋರ್ಸ್ ಸಮಿತಿ ಗ್ರಾಮೀಣ ಭಾಗದಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಲು ಮುಂದಾಗಬೇಕು. ಅವರು ಸರಿಯಾಗಿ ಜಾಗ್ರತೆ ವಹಿಸಿದ್ದರೆ ಗ್ರಾಮೀಣ ಭಾಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕರೊನಾ ಸೋಂಕು ಹರಡುತ್ತಿರಲಿಲ್ಲ.| ಲೋಕನಗೌಡ ಗೌಡರ, ಹಿರೇಹಾಳ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net