

ಚನ್ನರಾಯಪಟ್ಟಣ : ಅಲೆಮಾರಿ ಜನಾಂಗ ನಿವೇಶನ, ವಸತಿ, ಮಕ್ಕಳಿಗೆ ಶಿಕ್ಷಣ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗಿದ್ದು, ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ತಾಲೂಕು ಕುಳುವ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ನುಲಿಯ ಚಂದಯ್ಯ 918ನೇ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ನೇರಸಾಲ, ಗಂಗಾಕಲ್ಯಾಣ, ಭೂ ಖರೀದಿ ಯೋಜನೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು, ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ಯೋಜನೆ, ಸ್ವಉದ್ಯೋಗ, ಉದ್ಯಮಶೀಲತಾ ತರಬೇತಿ ನೀಡುವುದರಿಂದ ಜನಾಂಗದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಸರ್ಕಾರ 130 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಪಟ್ಟಣದಲ್ಲಿ ಅಲೆಮಾರಿ ಸಮುದಾಯದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಸಮುದಾಯ ಭವನ ನಿರ್ಮಾಣ ಮಾಡಲು ನಾಲ್ಕು ಕುಂಟೆ ನಿವೇಶನ ಮಂಜೂರು ಮಾಡಲಾಗಿದೆ. ಸಮುದಾಯ ಭವನ ನಿರ್ಮಾಣ ಮಾಡಲು ಅಂದಾಜು ಪಟ್ಟಿ ತಯಾರಿಸಿ 15 ದಿನಗಳ ಒಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಬಸವಣ್ಣನ ಸಮಕಾಲೀನ ನುಲಿಯ ಚಂದಯ್ಯ ಅವರು ಕಾಯಕದ ಮೂಲಕವೇ ಉನ್ನತಿ ಕಂಡವರು. ಹಗ್ಗ ನೇಯುವ ಕಾಯಕದಿಂದ ಬಂದ ಹಣದಿಂದ ದಾಸೋಹ ನಡೆಸಿದ ಶಿವಶರಣರು. ಬಸವ ಕಲ್ಯಾಣಕ್ಕೆ ಆಗಮಿಸಿದ ಇವರು ಕಾಯಕ ತತ್ವವನ್ನು ಜನಮಾನಸದಲ್ಲಿ ಬಿತ್ತಿದರು. ಕಾಯಕಕ್ಕೆ ಒತ್ತು ನೀಡುವ ಮೂಲಕ ಕೊರಚ, ಕೊರವ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದ ಮಹತ್ವವನ್ನು ಸಾರಿದ ನುಲಿಯ ಚಂದಯ್ಯ ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರು ಎಂದರು.
ತಾಲೂಕು ಕುಳುವ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ತಾಲೂಕಿನಲ್ಲಿರುವ ಅಲೆಮಾರಿಗಳ ಸ್ಥಿತಿಗತಿ, ಸಮಸ್ಯೆಗಳಲ್ಲಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಆದ್ಯತೆ ನೀಡಬೇಕು. ಅಲೆಮಾರಿಗಳು ಮನೆ, ಸ್ವಯಂ ಉದ್ಯೋಗ, ಒಟ್ಟಾರೆಯಾಗಿ ಜೀವನದಲ್ಲಿ ಭದ್ರತೆ ದೊರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಮಾತನಾಡಿ, 12ನೇ ಶತಮಾನ ಕನ್ನಡನಾಡಿನ ಚರಿತ್ರೆಯಲ್ಲಿ ಅತ್ಯಂತ ಗಮನಾರ್ಹವಾದ ಕಾಲ. ಶತಶತಮಾನಗಳಿಂದ ಉಳ್ಳವರ ಬಾಹುಗಳಲ್ಲಿ ಬಂಧಿಯಾಗಿ ಶೋಚನಿಯ ಬದುಕು ಸಾಗಿಸುತ್ತಿದ್ದ ಜನಸಮುದಾಯಕ್ಕೆ ಜೀವಜಲವಾಗಿ ಬಂದ ಬಸವಾದಿ ಶರಣರು ಕೆಳವರ್ಗದ ಜನರಲ್ಲಿ ಆತ್ಮಾಭಿಮಾನ ತುಂಬಿದರಲ್ಲದೆ ಅವರು ಸಮಾಜದಲ್ಲಿ ಗೌರವಯುತವಾಗಿ ತಲೆಯೆತ್ತಿ ಬದುಕುವಂತೆ ಮಾಡಿದರು. ನಾಡಿನ ಇತಿಹಾಸದಲ್ಲಿ ಇದೊಂದು ಮಹತ್ವದ ಕಾಲಘಟ್ಟ. ಬಸವಾದಿ ಪ್ರಮಥರು ಕಾಯಕ ಸಿದ್ಧಾಂತಕ್ಕೆ ಆದ್ಯತೆ ನೀಡಿ ಆ ಮೂಲಕ ದುಡಿಯುವ ವರ್ಗ ಅಥವಾ ಕಾಯಕ ಸಮಾಜದ ಔನ್ನತ್ಯಕ್ಕೆ ಅನುವು ಮಾಡಿಕೊಟ್ಟರು. ನಾಡಿನ ಪ್ರತಿಯೊಬ್ಬರೂ ದುಡಿದೇ ಉಣ್ಣಬೇಕು. ಪರರ ದುಡಿಮೆಯಲ್ಲಿ ತಿಂದುಂಡು ಬದುಕಬಾರದೆಂಬ ಸಿದ್ಧಾಂತವನ್ನು ಜನಮಾನಸದಲ್ಲಿ ಬಿತ್ತಿದರು. ಇಂತಹ ಶರಣರ ಪೈಕಿ ಕಾಯಕಯೋಗಿ ನುಲಿಯ ಚಂದಯ್ಯ ಒಬ್ಬರು ಎಂದು ತಿಳಿಸಿದರು.
ಜಯಂತ್ಯುತ್ಸವದಲ್ಲಿ ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ತಾಲೂಕು ಕುಡುವ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ರವಿಕುಮಾರ್, ರಂಗಸ್ವಾಮಿ, ಅಣ್ಣಯ್ಯಶೆಟ್ಟಿ, ಗಂಗಣ್ಣ, ರಾಧಾ ರಂಗಸ್ವಾಮಿ, ಮಂಜುನಾಥ್ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.