

ಮಸ್ಕಿ: ಪಟ್ಟಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಎಂಎಲ್ಸಿ ಬಸನಗೌಡ ಬಾದರ್ಲಿ ಹೇಳಿದರು.
ಇಲ್ಲಿನ ಪರಾಪುರ ರಸ್ತೆ ಬಳಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ದೇವಸ್ಥಾನ ನಿರ್ಮಾಣಕ್ಕೆ ರಡ್ಡಿ ಸಮಾಜದ ಮುಖಂಡರ ನಿಯೋಗ ಬೆಂಗಳೂರಿಗೆ ಬಂದರೆ ಸಾರಿಗೆ ಸಚಿವ ರಾಮಲಿಂಗರಡ್ಡಿ ಅವರಿಂದ ಹೆಚ್ಚಿನ ಅನುದಾನ ಒದಗಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಪ್ರಸಕ್ತ ವರ್ಷ 10 ಸಮುದಾಯ ಭವನಗಳ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು. ರಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಕುಮಾರೆಪ್ಪ ಕಮತರ್, ಆದನಗೌಡ ಸಂತೆಕೆಲ್ಲೂರು, ಶೇಖರಪ್ಪ ಮೇಟಿ, ವಿಶ್ವನಾಥ ರಡ್ಡಿ ಅಮೀನಗಡ, ಮಲ್ಲಪ್ಪ ಅಂಕುಶದೊಡ್ಡಿ, ಶರಣಪ್ಪ ತೋರಣದಿನ್ನಿ, ವೆಂಕಟರಡ್ಡೆಪ್ಪ, ಮಹಾಂತೇಶ ಹೂವಿನಬಾವಿ, ಮಲ್ಲಿಕಾರ್ಜುನ ಪರಡ್ಡಿ ಇತರರಿದ್ದರು.