ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ

4 nrp 1
Published on

ಎನ್.ಆರ್.ಪುರ: ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್,ಗೇಟ್ ನಿರ್ಮಾಣಕ್ಕೆ ತಾಪಂನಿಂದ ಈಗಾಗಲೇ 13 ಲಕ್ಷ ರೂ.ನೀಡಿದ್ದು ಅಗತ್ಯವಿದ್ದರೆ ಶಾಸಕರ ಕೋಟಾದಿಂದಲೂ ಅನುದಾನ ನೀಡಲಾಗುವುದು ಎಂದು ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿ,ಆಸ್ಪತ್ರೆ ಕಟ್ಟಡ ಮಳೆಯಿಂದ ಸೋರದಂತೆ ಸುರಕ್ಷಿತ ಕಾಮಗಾರಿ ಮಾಡಬೇಕು. ಕುಡಿಯುವ ನೀರಿಗೆ ಆಸ್ಪತ್ರೆಗೆ ಒಂದು ಬೋರ್‌ವೆಲ್ ನೀಡುತ್ತೇನೆ. ಸದ್ಯಕ್ಕೆ ಪಟ್ಟಣ ಪಂಚಾಯಿಂದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಸೂಚಿಸಿದರು.
ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿಜಯಕುಮಾರ್ ಮಾಹಿತಿ ನೀಡಿ, ಆಸ್ಪತ್ರೆ ಮುಂಭಾಗದಲ್ಲಿ ಅಂಬುಲೆನ್ಸ್ ಓಡಾಡಲು ರಸ್ತೆ ಅಗಲೀಕರಣ ಮಾಡಬೇಕು ಎಂದು ಮನವಿ ಮಾಡಿದರು. ನಿರ್ಮಿತ ಕೇಂದ್ರದಿಂದ ಸೂಕ್ತ ಪ್ಲಾನ್ ಮಾಡಿಸಲು ಶಾಸಕರು ಸೂಚಿಸಿದರು.
ಆಸ್ಪತ್ರೆಯ 1ಲಕ್ಷ ಮಂಗಳೂರು ಹೆಂಚನ್ನು ಹರಾಜು ಹಾಕಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮಾಸಿಕ ಗೌರವ ಧನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಅನುಮೋದನೆ ಬಗ್ಗೆ ಚರ್ಚೆ ನಡೆಯಿತು. ಆಸ್ಪತ್ರೆ ಆವರಣದಲ್ಲಿ ಇರುವ ಜನೌಷಧಿ ಕೇಂದ್ರವನ್ನು ಆಸ್ಪತ್ರೆಮುಂಭಾಗದ ಹಾಪ್ ಕಾಮ್ಸ್ ಮಳಿಗೆಗೆ ಸ್ಪಳಾಂತರಿಸುವ ಬಗ್ಗೆ ಚರ್ಚೆ ನಡೆಯಿತು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜನೌಷಧಿ ಕೇಂದ್ರದ ಜಾಗ ಪರಿಶೀಲನೆ ಮಾಡೋಣ. ಆಸ್ಪತ್ರೆಆವರಣದಲ್ಲಿ ಜನೌಷಧಿ ಕೇಂದ್ರ ಇರಬೇಕು ಎಂಬ ನಿಯಮವಿದೆ. 24 ಗಂಟೆಯೂ ಜನೌಷಧಿ ಕೇಂದ್ರ ತೆರೆಯಬೇಕು. ಸೂಕ್ತ ಜಾಗವನ್ನು ನಿರ್ಧರಿಸೋಣ ಎಂದರು.
ಇಒ ನವೀನ್ ಕುಮಾರ್, ಪಪಂ ಅಧ್ಯಕ್ಷೆ ಸುರೈಯಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರತನ್‌ಗೌಡ, ಪಿ.ಪಿ.ಎಲಿಯೇಸ್, ಸುಜಿತ್, ಎಂ.ಪಿ.ಅಭಿಲಾಶ್,ಶ್ರೀಧರ್, ದಾನಮ್ಮ, ನಂದನ್, ಸುನೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net