

ಎನ್.ಆರ್.ಪುರ: ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ಮೂಲಕ ರೈತರು ಹೆಚ್ಚು ಸೌಲಭ್ಯಗಳನ್ನು ಪಡೆಬಹುದು ಎಂದು ತಾಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ್ ಹೇಳಿದರು.
ವಿಎಸ್‌ಎಸ್ ಸಭಾಂಗಣದಲ್ಲಿ ನಡೆದ ಸೀತೂರು ಗ್ರಾಪಂ ಗ್ರಾಮ ಸಭೆಯಲ್ಲಿ ಮಾತನಾಡಿ, ರೈತರು ನರೇಗಾ ಯೋಜನೆಯಡಿ ವೈಯ್ಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿ ಮಾಡಬಹುದು. ದನದ ಕೊಟ್ಟಿಗೆ, ಕೃಷಿ ಹೊಂಡ, ಕೆರೆ, ಕಾಲುವೆ ಮುಂತಾದ ಕಾಮಗಾರಿ ಮಾಡಬಹುದು ಎಂದರು.
ಪ್ರಗತಿಪರ ಕೃಷಿಕ ಪಿ.ಕೆ.ಬಸವರಾಜ್ ಮಾತನಾಡಿ, ತಾಲೂಕಿನ 8 ಇಲಾಖೆಗಳ ಅಧಿಕಾರಿಗಳು ಗ್ರಾಮಸಭೆಗೆ ಆಗಮಿಸಿಲ್ಲ. ಕೆಲವು ಸರ್ಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ. ರೈತರು ತಮ್ಮ ಕೆಲಸಗಳಿಗಾಗಿ ತಾಲೂಕು ಕಚೇರಿ ಹಾಗೂ ವಿವಿಧ ಇಲಾಖೆಗಳಿಗೆ ಅಲೆಯಬೇಕಾಗಿದೆ ಎಂದು ದೂರಿದರು.
ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ್‌ಮಾಹಿತಿ ನೀಡಿ, ರೈತರು ಇನ್ನೂ ಕೂಡಾ ಪಹಣಿಗೆ ಆಧಾರ್ ಜೋಡಣೆ ಬಾಕಿ ಉಳಿಸಿಕೊಂಡಿದ್ದಾರೆ. ಉಳಿದ ರೈತರು ತಕ್ಷಣ ಪಹಣಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು.ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಒಂದು ತಿಂಗಳ ಒಳಗೆ ಗ್ರಾಪಂ ಕಚೇರಿಯಲ್ಲಿ ಸಿಗಲಿದೆ. ಒಂದು ತಿಂಗಳ ನಂತರ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಪಡೆಯಬಹುದು ಎಂದರು.
ಬೆಳ್ಳೂರು ಸಮುದಾಯ ಆರೋಗ್ಯ ಅಧಿಕಾರಿ ಕೆ.ಎಚ್.ನಾಗವೇಣಿ ಮಾತನಾಡಿ, ಈ ವರ್ಷ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂೆ ಹರಡುವ ಸಾಧ್ಯತೆ ಇದೆ ಆದ್ದರಿಂದ ಗ್ರಾಮಸ್ಥರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ, ಆರೋಗ್ಯ, ಕಂದಾಯ, ತೋಟಗಾರಿಕೆ, ಸಾಮಾಜಿಕ ಅರಣ್ಯ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಸೀತೂರು ಗ್ರಾಪಂ ಅಧ್ಯಕ್ಷೆ ಎಂ.ಎಸ್.ರೇಖಾ, ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಎಚ್.ಇ.ದಿವಾಕರ, ಎಸ್.ಉಪೇಂದ್ರ ರಾವ್, ದಾಮಿನಿ, ಎನ್.ಪಿ.ರಮೇಶ್, ಸುಜಾತ, ವಿಜಯ, ಸಿದ್ದಪ್ಪಗೌಡ ,ಪಿಡಿಒ ಶ್ರೀನಿವಾಸ್ ಉಪಸ್ಥಿತರಿದ್ದರು.