

ಬೆಂಗಳೂರು:ರಾಜ್ಯದ ಹಲವೆಡೆ ಸುರಿಯುತ್ತಿರುವ ಬೇಸಿಗೆ ಮಳೆ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ,ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಬಾಗಲಕೋಟೆ, ಬೆಳಗಾವಿ, ಧಾರವಾಡದಲ್ಲಿ ಏ.5ರಿಂದ ಏ.8 ರವರೆಗೆ ಗುಡುಗು ಮಿಂಚು ಸಹಿತ ಆಲಿಕಲ್ಲು ವರ್ಷಧಾರೆಯಾಗಲಿದೆ.ಗದಗ, ರಾಯಚೂರು, ಕೊಪ್ಪಳ, ಹಾವೇರಿ, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರದಲ್ಲಿ ಮುಂದಿನ 2 ದಿನ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಇದೇ ವೇಳೆ ರಾಜ್ಯದ ಕೆಲವೆಡೆ ಪ್ರತಿ ಗಂಟೆಗೆ 30-40 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಮಳೆ ಜತೆಗೆ ಬಿರುಗಾಳಿಯ ತೀವ್ರತೆ ಹೆಚ್ಚಿರಲಿದೆ.
ತಾಪಮಾನ ಕುಸಿತ: ಮೋಡ ಕವಿದ ವಾತಾವರಣ, ಮಳೆ ಸುರಿದಿರುವುದು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ 4-5 ಡಿ.ಸೆ. ತಾಪಮಾನ ಕುಸಿತವಾಗಿದೆ. ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನದಲ್ಲಿ 33-35 ಡಿ.ಸೆ., ಉತ್ತರ ಕರ್ನಾಟಕ ಭಾಗದಲ್ಲಿ 33-38 ಡಿ.ಸೆ. ಹಾಗೂ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 32-35 ಡೆ..ಸೆ. ಉಷ್ಣಾಂಶ ದಾಖಲಾಗಿದೆ.
ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಗಿಂತ ದಕ್ಷಿಣ ಕರ್ನಾಟಕ ವ್ಯಾಪ್ತಿಯಲ್ಲಿ ಮಳೆ ತುಸು ಬಿರುಸಾಗಿ ಸುರಿಯಲಿದೆ. ಕೆಲ ಭಾಗಗಳಲ್ಲಿ ಉತ್ತಮವಾಗಿ ಪೂರ್ವ ಹಿಂಗಾರು ಮಳೆ ಬಿದ್ದಿದೆ. ತಾಪಮಾನ ಹೆಚ್ಚಿದಂತೆ ವರ್ಷಧಾರೆಯಾಗುತ್ತದೆ.
| ಸಿ.ಎಸ್.ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.