

ದಾಂಡೇಲಿ: ಭಾಷೆ ಉಳಿವಿಗಾಗಿ ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಹೆಚ್ಚಾಗಿ ನಡೆಯಬೇಕು ಎಂದು ಸಾಹಿತಿ ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ಆಲೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ದಾಂಡೇಲಿ ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಹಳ್ಳಿಯ ಜನರ ಮನಸಿನಲ್ಲಿ ಸಮ್ಮೇಳನಗಳೆಂದರೆ ಜಾತ್ರೆಯ ಸಂಭ್ರಮ ಎಲ್ಲರನ್ನು ಕರೆದು ಆತ್ಮೀಯವಾಗಿ ಸತ್ಕರಿಸುತ್ತಾರೆ. ಅದೇ ಮನಸಿಗೆ ಖುಷಿ ನೀಡುವ ಸಂಗತಿ. ಇಂದು ನಾವು ಮಕ್ಕಳನ್ನು ಅತಿ ಒತ್ತಡದಲ್ಲಿ ಇಟ್ಟಿದ್ದೇವೆ. ಅಂಕ, ಇಂಗ್ಲಿಷ್ ಮಾಧ್ಯಮದ ಹಿಂದೆ ಬಿದ್ದು ಮಕ್ಕಳಿಗೆ ಮನೋವೈಜ್ಞಾನಿಕ ಚಿಂತನಶಕ್ತಿ ಕಳೆದು ಹಾಕಿದ್ದೇವೆ. ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ಪಾಲಕರ ಮನಸ್ಥಿತಿ ಇದ್ದು, ಭಾಷೆಯ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಸಮ್ಮೇಳನಾಧ್ಯಕ್ಷ ಯು.ಎಸ್. ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ನನ್ನ ವೃತ್ತಿ ಬದುಕು ದಾಂಡೇಲಿ ಜೀವನದ ಜತೆ ಬೆರೆತು ಹೋಗಿದೆ. ಹಲವಾರು ಮಜಲುಗಳನ್ನು ಕಂಡಿದ್ದೇನೆ. ಕನ್ನಡದ ಸಾಹಿತ್ಯ ಸಮ್ಮೇಳನ ನಿಜವಾಗಿಯೂ ಹಳ್ಳಿಯ ಅಂಗಳಕ್ಕೆ ಬಂದಿದ್ದು ಸಂತಸ ತಂದಿದೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿ, ಗ್ರಾಮೀಣ ಬದುಕನ್ನು ಸಾಹಿತ್ಯಕ್ಕೆ ಹಾಗೂ ಗ್ರಾಮೀಣರಿಗೆ ಸಾಹಿತ್ಯಿಕ ಪರಿಚಯ ಮಾಡುವ ಉದ್ದೇಶದಿಂದ ಈ ಬಾರಿ ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷ ಅಶ್ಪಾಕ್ ಅಹ್ಮದ್ ಶೇಖ ದ್ವಾರ ಉದ್ಘಾಟಿಸಿದರು. ಆಲೂರಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ ಜಹಾನ್ ನದಾಫ್ ಪುಸ್ತಕ ಮಳಿಗೆ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಎಲ್. ಜಮಾದಾರ ಸಮ್ಮೇಳನಾಧ್ಯಕ್ಷ ಯು.ಎಸ್. ಪಾಟೀಲ ಅವರಿಗೆ ಧ್ವಜ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಶೈಲೇಶ ಪರಮಾನಂದ, ತಾಪಂ ಇಒ ಟಿ.ಸಿ. ಹಾದಿಮನಿ , ಪೌರಾಯುಕ್ತ ವಿವೇಕ ಬನ್ನೆ, ಗ್ರಾಪಂ. ಉಪಾಧ್ಯಕ್ಷೆ ನಾಗರತ್ನ ನಾಯ್ಕ, ಎಸಿಎಫ್ ಸಂತೋಷ ಚವ್ಹಾಣ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ ಜೆ.ಆರ್., ಇದ್ದರು. ಎನ್.ವಿ. ಪಾಟೀಲ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ನಾಗೇಶ ನಾಯಕ ದ್ವಾರಗಳನ್ನು ಪರಿಚಯಿಸಿದರು. ಗುರುಶಾಂತ ಜಡೆಹಿರೇಮಠ ಸಂದೇಶ ವಾಚಿಸಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಸ್ವಾಗತಿಸಿದರು. ಆಶಾದೇಶ ಭಂಡಾರಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ ನಾಯಕ ವಂದಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಆಲೂರಿನ ಗ್ರಾಮ ದೇವತೆ ಲಕ್ಷ್ಮೀದೇವಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸುಮಂಗಲೆಯರ ಪೂರ್ಣ ಕುಂಭ, ಭಜನೆ, ಶಾಲಾ ಮಕ್ಕಳ ಛದ್ಮವೇಷಗಳು ಮೆರವಣಿಗೆಯ ಕಳೆಗಟ್ಟಿದ್ದವು.