ನಾರ್ಮಲ್‌ಗಿಂತ ಸಿಸೇರಿಯನ್ನೇ ಅಧಿಕ: ಸಚಿವರ ಕಳವಳ

dinesh
ಶಿವಮೊಗ್ಗದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಕೆ.ಬಿ.ಶಿವಕುಮಾರ್, ಗುರುದತ್ತ ಹೆಗಡೆ, ಎನ್.ಹೇಮಂತ್ ಇದ್ದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಸಹಜ ಹೆರಿಗೆಗಿಂತಲೂ ಸಿಸೇರಿಯನ್ ಸಂಖ್ಯೆಯಲ್ಲಿ ವಿಪರೀತ ಏರಿಕೆ ಆಗಿರುವುದನ್ನು ಕಂಡು ಸ್ವತಃ ಆರೋಗ್ಯ ಸಚಿವರೇ ಹೌಹಾರಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಗರಿಷ್ಠ ಶೇ.49 ಇದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಗರಿಷ್ಠ ಶೇ.73 ಇರುವುದನ್ನು ಕಂಡು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಅಧಿಕಾರಿಗಳು ನೀಡಿದ ಅಂಕಿ ಅಂಶಗಳನ್ನು ಕಂಡು ಆತಂಕ ವ್ಯಕ್ತಪಡಿಸಿದರು. ಈ ಪ್ರಮಾಣದಲ್ಲಿ ಸಿಸೇರಿಯನ್ ಮಾಡುವ ಅವಶ್ಯವಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ರಾಜ್ಯದಲ್ಲಿ ಸರಾಸರಿ ಸಿಸೇರಿಯನ್ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.

ಸಿಸೇರಿಯನ್ ಮಾಡುವುದರಿಂದ ವೈದ್ಯರ ಕೆಲಸ ಸಲೀಸಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದರಿಂದ ಆದಾಯ ಹೆಚ್ಚಾಗುತ್ತದೆ. ಯಾವ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಸಿಸೇರಿಯನ್ ಮಾಡಲಾಗುತ್ತಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಸಹಜ ಹೆರಿಗೆ ಬಗ್ಗೆ ಗರ್ಭಿಣಿಯರಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿಯನ್ನು ಎಲ್ಲರಿಗೂ ಕಾಣುವಂತೆ ಅಳವಡಿಸಬೇಕೆಂದು ನಿಯಮವಿದೆ. ಆದರೆ ಇದು ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ. ಈ ಬಗ್ಗೆ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಬೇಕು. ಆಸ್ಪತ್ರೆಗಳಲ್ಲಿನ ದರ ಸಾರ್ವಜನಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ.ಶಿವಕುಮಾರ್, ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net