ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸಂಶೋಧನೆಗಳು ಹೆಚ್ಚಲಿ

Reen
Published on

ಹುಬ್ಬಳ್ಳಿ: ಇಂಜಿನಿಯರಿಂಗ್ ಶಿಕ್ಷಣದಲ್ಲಿ ಹೆಚ್ಚು ಸಂಶೋಧನೆಗಳು ನಡೆಯಲಿ. ಇದರಿಂದ ಸಮಾಜಕ್ಕೆ ಒಳಿತಾಗಲಿದೆ ಎಂದು ಜೋಹಾನ್ಸಬರ್ಗ್ (ದಕ್ಷಿಣಾ ಆಫ್ರಿಕಾ) ವಿಶ್ವವಿದ್ಯಾಲಯದ ರಿಸರ್ಚ್ ಇನ್ ಇಂಜಿನಿಯರಿಂಗ್ ಎಜ್ಯುಕೇಶನ್ ನೆಟವರ್ಕ್ (ಆರ್​ಇಇಎನ್) ಅಧ್ಯಕ್ಷೆ ಡಾ. ತೇರೆಸಾ ಹ್ಯಾಟಿಂಗ್ ಹೇಳಿದರು.

ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಗುರುವಾರ ಆಯೋಜಿಸಿದ್ದ ಇಂಜಿಯರಿಂಗ್ ಶಿಕ್ಷಣದಲ್ಲಿ ಸಂಶೋಧನೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು 2011ರಲ್ಲಿ ಸ್ಥಾಪನೆಯಾದ ಆರ್​ಇಇಎನ್ ತನ್ನ ಸಂಪನ್ಮೂಲಗಳಿಂದ ಪ್ರಾದೇಶಿಕವಾಗಿ ಸ್ವತಂತ್ರವಾದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜಾಲಗಳನ್ನು ಅಭಿವೃದ್ಧಿ ಪಡಿಸುವ ದೃಷ್ಟಿಕೋನವನ್ನು ಹೊಂದಿದೆ ಎಂದರು.

ಐಯುಸಿಇಇ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೃಷ್ಣ ವೇದುಲಾ ಮಾತನಾಡಿ, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಸಂಶೋಧನೆಯ ಮಹತ್ವವನ್ನು ವಿವರಿಸಿದರು.

ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ಜಾಗತಿಕ ಉತ್ತಮ ಅಭ್ಯಾಸಗಳನ್ನು ಮುಂಚೂಣಿಗೆ ತರುವ ಮೂಲಕ ಇಂಜಿನಿಯರಿಂಗ್ ಶಿಕ್ಷಣದ ಮಹತ್ವವನ್ನು ಹೆಚ್ಚಿಸಬೇಕಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥ ವಿಚಾರ ಸಂಕಿರಣವನ್ನು ಕೆಎಲ್​ಇ ಆಯೋಜಿಸಿದೆ ಎಂದರು.

ಸೊಲ್ಲಾಪುರ ಎಂಐಟಿ ವಿಶ್ವಪ್ರಯಾಗ ವಿಶ್ವವಿದ್ಯಾಲಯ ಕುಲಪತಿ ಡಾ. ಗೋಪಾಲಕೃಷ್ಣ ಜೋಶಿ, ಡಾ. ಪ್ರಕಾಶ ತೇವರಿ, ಪ್ರೊ. ಸೋಹಂ ಸೋಹಾನಿ, ಡಾ. ಬಿ.ಎಸ್. ಅನಾಮಿ, ಡಾ. ವಿಜಯಲಕ್ಷ್ಮೀ, ಡಾ. ಪ್ರೀತಿ ಬಳಿಗಾರ, ಇತರರು ಇದ್ದರು. ಕೆ.ಜಿ. ರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿರ್ದೇಶಕ ಡಾ. ರೋಹಿತ ಕಂಡಕಟ್ಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net