ಹೊಲದಲ್ಲಿ ಕೊಳೆಯುತ್ತಿರುವ ಕುಂಬಳಕಾಯಿ

MTG 5-1
Published on

ಸಿದ್ದು ಕೆರಿಗೊಂಡ ಮೋರಟಗಿ

ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಕುಂಬಳಕಾಯಿ, ಕಲ್ಲಂಗಡಿ ಲಾಕ್‌ಡೌನ್ ಹಿನ್ನೆಲೆ ವ್ಯಾಪಾರ- ವಹಿವಾಟು ಇಲ್ಲದೆ ಕೊಳೆತು ಹೋಗುವ ಸ್ಥಿತಿಯಲ್ಲಿವೆ.

ಸಮೀಪದ ಬಿಸನಾಳ, ಆಹೇರಿ ಗ್ರಾಮದ ಬಸಲಿಂಗಪ್ಪ ಪಾಟೀಲ, ಬುಕರಾಯಗೌಡ ಬಿರಾದಾರ, ಶರಣಪ್ಪ ಪಾಟೀಲ, ಚನ್ನಬಸಪ್ಪ ಬಿರಾದಾರ, ಮಲಗೊಂಡಪ್ಪ ಪಾಟೀಲ, ಶಂಕರಗೌಡ ಬಿರಾದಾರ, ಬಾಳಪ್ಪ ಪಾಟೀಲ, ಯಲ್ಲಪ್ಪ ಬಿರಾದಾರ, ರೇವಣಸಿದ್ದ ಪೂಜಾರಿ, ಸಿದ್ರಾಮಪ್ಪ ಪಾಟೀಲ, ಶರಣಪ್ಪ ಪೂಜಾರಿ, ಶರಣಪ್ಪ ಮಂಗಾಳಿ, ಚಂದಪ್ಪ ಬಿರಾದಾರ, ರೇವಣಸಿದ್ದ ಜೇರಟಗಿ, ಅಮೋಘಸಿದ್ದ ಪಾಟೀಲ ಸೇರಿ ಅಂದಾಜು 20ಕ್ಕೂ ಅಧಿಕ ರೈತರು 50 ಎಕರೆಗಿಂತ ಅಧಿಕ ಕುಂಬಳಕಾಯಿ ಬೆಳೆ ಬೆಳೆದಿದ್ದಾರೆ. ಆದರೆ, ಬೆಳೆದ ಬೆಳೆಯನ್ನು ಸಿಂದಗಿ, ಆಲಮೇಲ, ಕಲಕೇರಿ, ಜೇವರ್ಗಿ ಮಾರುಕಟ್ಟೆಗಳಿಗೆ ಹೋಗಿ ವ್ಯಾಪಾರ ಮಾಡಬೇಕು ಎನ್ನುವಷ್ಟರಲ್ಲಿ ಕರೊನಾ ವೈರಸ್ ಹಿನ್ನೆಲೆ ಸರ್ಕಾರ 144 ನಿಷೇಧಾಜ್ಞೆ ಜಾರಿಗೊಳಿಸಿತು. ಹೀಗಾಗಿ ರೈತರ ಬೆಳೆಗಳು ಹೊಲದಲ್ಲೇ ಕೊಳೆಯುವಂತಾಗಿದೆ.

ಸಾಲ ಮಾಡಿ ಬೆಳೆದ ಕುಂಬಳಕಾಯಿ ಮಾರಾಟವಾಗದೆ ಕೆಲ ರೈತರು ಗ್ರಾಮದಲ್ಲಿ ಪುಕ್ಕಟ್ಟೆಯಾಗಿ ನೀಡುತ್ತಿದ್ದಾರೆ. ಇನ್ನುಳಿದ ಕುಂಬಳಕಾಯಿ ಕೊಳೆತು ಹೋಗುತ್ತಿದ್ದು, ಸಾಲ ಮುಟ್ಟಿಸುವ ಚಿಂತೆಯಲ್ಲಿ ಮುಳುಗಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.

ಒಬ್ಬ ಸರ್ಕಾರಿ ಅಧಿಕಾರಿ ಬರೀ 21 ದಿನ ಅಷ್ಟೆ ಅಲ್ಲ, ವರ್ಷವಿಡೀ ಲಾಕಡೌನ್ ಮಾಡಿದರೂ ಬದುಕುತ್ತಾನೆ. ಆದರೆ, ರೈತರು ತಾವು ಬಂಡವಾಳ ಹಾಕಿ ಬೆಳೆದ ಬೆಳೆ ಹಾಳಾದರೆ ಬದುಕುವುದು ಹೇಗೆ ಸಾಧ್ಯ? ಕೂಡಲೇ ಸರ್ಕಾರ ರೈತನಿಗೆ ನೆರವಾಗಬೇಕು.
ಅಣ್ಣಾರಾಯ ಈಳಗೇರ, ಜಿಲ್ಲಾಧ್ಯಕ್ಷ ಕರ್ನಾಟಕ ಪ್ರಾಂತ್ಯ ರೈತ ಸಂಘ ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net