ನೈತಿಕತೆ ಕಳೆದುಕೊಂಡಿದೆ ಕಾಂಗ್ರೆಸ್ ಸರ್ಕಾರ

24Rayabag2
Published on

ರಾಯಬಾಗ: ಕಲಬುರ್ಗಿಯಲ್ಲಿ ಈಚೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ಮಾಡಿ, ಅಕ್ರಮವಾಗಿ ಬಂಧನ ಮಾಡಿರುವ ಘಟನೆಯನ್ನು ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಭ್ರಷ್ಟಾಚಾರ, ಗುಂಡಾಗಿರಿಯಲ್ಲಿ ತೊಡಗಿ ನೈತಿಕತೆ ಕಳೆದುಕೊಂಡಿದೆ. ಪ್ರತಿಪಕ್ಷ ನಾಯಕರಿಗೆ ರಕ್ಷಣೆ ಕೊಡಲಾಗದ ಗೃಹ ಸಚಿವ ಡಾ.ಪರಮೇಶ್ವರ ಹಾಗೂ ಗೂಂಡಾವರ್ತನೆ ತೋರುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿದ್ದ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ಎಸ್‌ಸಿ ಜನಾಂಗದವರಿಗೆ ನೀಡಬೇಕಿರುವ 40 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ ಮಾತನಾಡಿ, ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ವಿಲಗೊಂಡು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ವಿರೋಧ ಪಕ್ಷದ ನಾಯಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದರು. ಕಾಂಗ್ರೆಸ್ ಸರ್ಕಾರ ವಿರುದ್ಧ ರೂಪಿಸಿರುವ ಚಾರ್ಜ್‌ಶೀಟ್‌ನ್ನು ಬಿಜೆಪಿ ಮುಖಂಡರು ಬಿಡುಗಡೆಗೊಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ, ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಭರತೇಶ ಬನವಣೆ, ಎಲ್.ಬಿ.ಚೌಗುಲೆ, ಅಮೃತ ಕುಲಕರ್ಣಿ, ಸದಾಶಿವ ಘೋರ್ಪಡೆ, ರಾಜಶೇಖರ ಖನದಾಳೆ, ಸದಾನಂದ ಹಳಿಂಗಳಿ, ಅಪ್ಪಾಸಾಹೇಬ ಬ್ಯಾಕೂಡ, ಮಹಾನಿಂಗ ಹಂಜಿ, ಸಂಗಣ್ಣ ದತ್ತವಾಡೆ, ಬಸವರಾಜ ಡೊಣವಾಡೆ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net