

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದಿನ ರಾಜಕಾರಣ ಇಂದಿನ ರಾಜಕಾರಣ ಸಾಕಷ್ಟು ಭಿನ್ನವಾಗಿದೆ. ವಾಸ್ತವವಾಗಿ ಸೈದ್ಧಾಂತಿಕ ರಾಜಕಾರಣದ ಜಾಗಕ್ಕೆ ಸಮಯ ಸಾಧಕ ರಾಜಕಾರಣ ಬಂದಿದೆ ಎಂದು ಹಿರಿಯ ಸಾಹಿತಿ ಬರಗೂರ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಸಹ ಭಿನ್ನಾಭಿಪ್ರಾಯಗಳಿದ್ದವು. ಅವುಗಳನ್ನು ಸಮಚಿತ್ತದಿಂದ ವಿನಿಮಯ ಮಾಡಿಕೊಳ್ಳುತ್ತಿದ್ದರು. ಕೆಲವರು ಸಿಟ್ಟಾಗಿ ತಮ್ಮ ವಿಚಾರಗಳನ್ನು ಪ್ರಬಲವಾಗಿ ಮಂಡಿಸುತ್ತಿದ್ದರು. ಎಂದಿಗೂ ಕೆಳಮಟ್ಟದ ಬೈಗುಳ ಬಳಸುತ್ತಿರಲಿಲ್ಲ. ಆದರೆ ಇಂದು ನುಡಿ, ನೈತಿಕತೆ ನಾಶವಾಗಿದೆ ಎಂದರು.
ರಾಜಕೀಯ ಗುಂಪುಗಳು ನಮ್ಮಲ್ಲಿವೆ ಹೊರತು ನಿಜವಾದ ರಾಜಕೀಯ ಪಕ್ಷಗಳಿಲ್ಲ. ಹೀಗಾಗಿ ಜನರು ಜಾಗೃತರಾಗಬೇಕು. ಎಲ್ಲರೂ ನಿರಾಶರಾಗಿಲ್ಲ. ಇವರನ್ನು ಸರಿ ದಾರಿಗೆ ತರುವ ಶಕ್ತಿ ಜನ ಪಡೆಯುತ್ತಾರೆ. ಅತಿರೇಕಕ್ಕೆ ಹೋಗುವುದು ಬೇಸರ ತರಿಸಿದೆ. ಚುನಾವಣೆ ಒಂದು ಸ್ಪರ್ಧೆ. ಯುದ್ಧ, ಸಮರವಲ್ಲ. ವ್ಯಕ್ತಿಗತ ಟೀಕೆ ಮೀರಿ ತಮ್ಮ ತಮ್ಮ ಪಕ್ಷದ ಸಿದ್ಧಾಂತ ಹೇಳಬೇಕು. ಆದರೆ ಇಂದು ಸಿದ್ಧಾಂತ ಕೇವಲ ಶೇ. 25ರಷ್ಟಿದೆ. ಶೇ. 75ರಷ್ಟು ಬೇರೆ ವಿಚಾರ ಪ್ರಸ್ತಾಪವಾಗುತ್ತಿದೆ. ಇಲ್ಲಿ ಅಭಿರುಚಿ, ಆರೋಗ್ಯಕರ ನುಡಿ ಕಾಣುತ್ತಿಲ್ಲ. ಇದು ಅತಿರೇಕಕ್ಕೆ ಹೋದಾಗ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.