

ಹುಬ್ಬಳ್ಳಿ: ಯಾವುದೇ ಕ್ಷೇತ್ರವನ್ನು ಮಹಿಳೆಯರು ಪ್ರವೇಶ ಮಾಡಿದರೂ ಅವರು ಮನೋಬಲವನ್ನು ಕಾಪಾಡಿಕೊಳ್ಳಬೇಕು. ಅನುಮಾನ, ಅವಮಾನಗಳು ಸಹಜವಾಗಿ ಬರುತ್ತವೆ. ಅದನ್ನು ಎದುರಿಸುವ ಸಾಮರ್ಥ್ಯ ಮನೋಬಲದಿಂದ ಮಾತ್ರ ಲಭಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಜಿ. ಶಾಂತಿ ಅಭಿಪ್ರಾಯಪಟ್ಟರು.
ಇಲ್ಲಿನ ಕರ್ನಾಟಕ ವಾಣಿಜ್ಯದ್ಯೋದಮ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಕುಟುಂಬಕ್ಕಾಗಿ ಇಡೀ ಜೀವನವನ್ನೇ ಮಹಿಳೆಯರು ತ್ಯಾಗ ಮಾಡುತ್ತಾರೆ. ಯಾವುದೇ ಸವಾಲು ಕೊಟ್ಟರೂ ಸರಿಯಾಗಿ ನಿಭಾಯಿಸುತ್ತಾರೆ. ಇದರ ಜತೆಗೆ ಆರೋಗ್ಯದ ಕಡೆಗೂ ಮಹಿಳೆಯರು ಗಮನ ಹರಿಸಬೇಕು. ಅಡೆತಡೆ ಬಂದರೂ ಹೆದರದೇ ಹಿಮ್ಮೆಟ್ಟಿಸಬೇಕು ಎಂದು ಸಲಹೆ ನೀಡಿದರು.
ನವೋದ್ಯಮಿ ಕಬಿತಾ ಸಿಂಗ್ ಮಾತನಾಡಿ, ಕುಟುಂಬದ ಜವಾಬ್ದಾರಿ ಜತೆಗೆ ಉದ್ಯಮ ಆಯ್ಕೆ ಮಾಡಿಕೊಂಡಿದ್ದು ಅನಿರೀಕ್ಷಿತ. ಆದರೂ ಪತಿಯ ಸಹಕಾರದಿಂದ ಅಡುಗೆ ತಯಾರಿಕೆ ಬಗ್ಗೆ ಮಾಹಿತಿ ನೀಡುತ್ತ ಯೂಟ್ಯೂಬರ್ ಆಗಿ ಹೊರಹೊಮ್ಮಿದೆ. ಯಾವುದೇ ಮಹಿಳೆ ಇರಲಿ ಅವರಿಗೆ ಪ್ರೋತ್ಸಾಹ ಸಿಕ್ಕಾಗ ಹೇಗೆ ಬೆಳೆಯುತ್ತಾರೆ ಎನ್ನುವುದಕ್ಕೆ ನಾನೇ ಉದಾಹರಣೆ ಎಂದರು.
ಹೆಸ್ಕಾಂ ಎಸ್ಇ ಶರಣಮ್ಮ ಜಂಗಿನ್ ಮಾತನಾಡಿ, ಯಾರಲ್ಲಿ ಬುದ್ಧಿವಂತಿಕೆ ಇರುತ್ತದೆಯೋ ಅಂಥವರಿಗೆ ಪ್ರೋತ್ಸಾಹ ಸಿಗಬೇಕು. ಸಿಕ್ಕ ಕ್ಷೇತ್ರದಲ್ಲಿ ಹಠ ಬಿಡದೇ ಉನ್ನತ ಸ್ಥಾನ ತಲುಪಬೇಕು. ಮಹಿಳೆಯರೂ ಯಾವುದರಲ್ಲಿಯೂ ಕಡಿಮೆ ಇಲ್ಲವೆಂಬುದನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.
ಕೆಸಿಸಿಐ ಮಹಿಳಾ ಘಟಕದ ಅಧ್ಯಕ್ಷೆ ನಿಪಾ ಮೆಹ್ತಾ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕೆ.ಜಿ. ಶಾಂತಿ, ಕಬಿತಾ ಸಿಂಗ್, ಶರಣಮ್ಮ ಜಂಗಿನ್, ಡಾಲಿ ಜೈನ್ ಅವರನ್ನು ಸನ್ಮಾನಿಸಲಾಯಿತು. ಐಎನ್ಐಎಫ್ಡಿ ವಿದ್ಯಾರ್ಥಿಗಳು ರ‍್ಯಾಂಪ್ ವಾಕ್ ಮಾಡಿದರು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಪದಾಧಿಕಾರಿಗಳಾದ ರವಿ ಅಗಡಿ, ಸಂದೀಪ ಬಿಡಸಾರಿಯಾ, ವೀರೇಶ ಮೊಟಗಿ, ರವೀಂದ್ರ ಬಳಿಗಾರ, ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷರಾದ ಮಹೇಂದ್ರ ಲದ್ದಡ, ಶಂಕರಣ್ಣ ಮುನವಳ್ಳಿ, ಪಲ್ಲವಿ ಮಲಾನಿ ಇತರರು ಇದ್ದರು.