

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ವಿಜ್ಞಾನದ ಜತೆಗೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ-ತಾಯಿ ಮಾರ್ಗದರ್ಶನದಲ್ಲಿ ಒಳ್ಳೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವತಿಯಿಂದ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಜ್ಞಾನ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಸತತ ಪ್ರಯತ್ನ, ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಉತ್ತಮ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುನ್ನಡೆದರೆ ಸಮಾಜದಲ್ಲಿ ಉನ್ನತ ಗೌರವ ಮತ್ತು ಸ್ಥಾನಮಾನ ಗಳಿಸಬಹುದು ಎಂದರು.
ಡಾ. ಬಿ.ಜಿ.ಮೂಲಿಮನಿ ಮಾತನಾಡಿ, ಉತ್ತಮ ಸಂಪನ್ಮೂಲ ಮತ್ತು ಸಂಸ್ಕೃತಿ ಹೊಂದಿರುವ ಭಾರತ ದೇಶವು ವಿಜ್ಞಾನದಲ್ಲಿ ಉತ್ತಮ ಸಂಶೋಧನೆಗಳ ಮೂಲಕ ಸಾಧನೆ ಮಾಡಿದೆ. ನೋಬೆಲ್ ಪಾರಿತೋಷಕವನ್ನು ತರುವಂತಹ ಉತ್ತೇಜನವನ್ನು ವಿದ್ಯಾರ್ಥಿಗಳಿಗೆ ನೀಡಲು ಇಂತಹ ಕಾರ್ಯಕ್ರಮಗಳು ಬುನಾದಿ. ಸರ್ ಸಿ.ವಿ. ರಾಮನ್ ಹೊರತುಪಡಿಸಿ ಭಾರತಕ್ಕೆ ವಿಜ್ಞಾನದಲ್ಲಿ ನೋಬೆಲ್ ಪಾರಿತೋಷಕ ದೊರೆತಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉನ್ನತ ಮಟ್ಟದ ಸಂಶೋಧನೆ ನಡೆಸಿ ನೋಬೆಲ್ ಪ್ರಶಸ್ತಿ ತರವಂತಾಗಲಿ ಎಂದರು.
ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಮಾತನಾಡಿದರು. ಡಾ. ಎಸ್.ಎಂ. ಶಿವಪ್ರಸಾದ ಅವರು ನ್ಯಾನೋ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ ಕುರಿತು ಉಪನ್ಯಾಸ ನೀಡಿದರು.
ಡಾ. ಎಚ್.ಎನ್.ಸುರೇಶಕುಮಾರ, ಕೆ.ಎನ್.ಪಾಟೀಲ, ಎಸ್.ಎಸ್. ನವಲಗುಂದ, ಇತರರು ಇದ್ದರು.