

ಶಿವಮೊಗ್ಗ: ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲರೂ ನೈತಿಕ ಬೆಂಬಲ ನೀಡಿದ್ದು, ಇಡೀ ದೇಶದ ಜನ ಕೇಂದ್ರ ಸರ್ಕಾರ ಪರವಾಗಿದ್ದಾರೆ. ಕೃತ್ಯವನ್ನು ಯಾರು ಬೆಂಬಲಿಸಿದ್ದಾರೋ ಹಾಗೂ ಘಟನೆಗೆ ಕಾರಣರಾಗಿದ್ದಾರೋ ಅವರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಆಗ್ರಹಿಸಿದರು.
ವಿಜಯನಗರ ಬಡಾವಣೆ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥರಾವ್ ಅವರ ನಿವಾಸಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.
ಕಾಶ್ಮೀರದಲ್ಲಿ ನಡೆದ ಘಟನೆಯಲ್ಲಿ ದೇಶದ ಹಲವಾರು ಜನ ನಮ್ಮನ್ನ ಅಗಲಿದ್ದಾರೆ. ಕರ್ನಾಟಕ ಮೂವರಿದ್ದು, ಅದರಲ್ಲಿ ಮಂಜುನಾಥ್ ರಾವ್ ಕೂಡ ಬಬ್ಬರು. ನಾನು ಗುರುವಾರವೇ ಶಿವಮೊಗ್ಗಕ್ಕೆ ಬರಬೇಕಿತ್ತು. ಕಾರಣಾಂತರದಿಂದ ಬರಲು ಆಗಲಿಲ್ಲ. ಇಂದು ಬಂದು ತಾಯಿ(ಪಲ್ಲವಿ) ಜತೆ ಮಾತನಾಡಿದ್ದೇನೆ. ನೋವಿನಲ್ಲಿರುವವರನ್ನು ನಾವು ಎಷ್ಟೇ ಸಂತೈಸಿದರೂ ಕಡಿಮೆಯೇ. ಆದರೂ ಮಂಜುನಾಥರಾವ್ ಅವರ ಕುಟುಂಬದ ಜತೆ ಇಡೀ ದೇಶ, ರಾಜ್ಯದ ಜನರಿದ್ದಾರೆ ಎಂದರು.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿ ಸಂದರ್ಭದಲ್ಲಿ ಆ ತಾಯಿ ಮತ್ತು ಮಗು ತೆಗೆದುಕೊಂಡ ಧೈರ್ಯವನ್ನು ಮೆಚ್ಚಲೇಬೇಕು. ಅಲ್ಲಿ ನಡೆದ ಘಟನೆ ಬಗ್ಗೆ ವಿವರವಾಗಿ ಕುಟುಂಬಸ್ಥರು ಹೇಳಿದ್ದಾರೆ. ಸ್ಥಳೀಯರು ಸಹ ಪ್ರವಾಸಿಗರ ನೆರವಿಗೆ ಧಾವಿಸಿದ್ದಾರೆ. ಇದು ಭಾರತೀಯರ ಪರಂಪರೆ. ಅದನ್ನು ಕಾಶ್ಮೀರದವರು ತೋರಿಸಿದ್ದಾರೆ ಎಂದ ಅವರು, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಪರಿಹಾರ ಹೆಚ್ಚಳ ಮಾಡುವ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಮಾತನಾಡುತ್ತೇನೆ ಎಂದರು. ಇದೇ ವೇಳೆ ಶಾಸಕರ ಅನರ್ಹ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಖಾದರ್ ನಿರಾಕರಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಬಲ್ಕಿಷ್ ಬಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಎಚ್.ಸಿ.ಯೋಗೇಶ್ ಮತ್ತಿತರರಿದ್ದರು.