

ಹಿರಿಯೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆಯಲ್ಲಿ ಕಾಲದೂಡುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಇಡೀ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದೆ ಎಂದರು.
ವಾಲ್ಮೀಕಿ ನಿಗಮ-ಮುಡಾ ಹಗರಣಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಿದ ಮೇಲೂ ಡಿ ನೋಟಿಫಿಕೇಶನ್ ಆಗುವುದಾದರೂ ಹೇಗೆ. ಕೆಲವರಿಗೆ ಸೈಟ್ ಹಂಚಿಕೆಯಾದ ಮೇಲೆ ಮೊದಲು ಅಳಿಯನ ಹೆಸರಿಗೆ ನಂತರ ಹೆಂಡತಿಗೆ ದಾನ ಪತ್ರ ಮಾಡಲಾಗಿದೆ ಎಂದು ತಿಳಿಸಿದರು.
2013 ರಿಂದ 2018 ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ನಡೆದ ಹಗರಣಗಳನ್ನು ಮುಚ್ಚಿಹಾಕಲು ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸಿ ಎಸಿಬಿ ತಂದರು. ಇದೀಗ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟ ಮೇಲೆ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ನ್ಯಾಯ ಸಮ್ಮತವಲ್ಲ ಎಂದರು.
ತಮ್ಮದು ಪಾರದರ್ಶಕ, ಭ್ರಷ್ಟಾಚಾರ ಮುಕ್ತ ರಾಜಕಾರಣ ಎನ್ನುವುದಾದರೆ ಮೊದಲು ರಾಜೀನಾಮೆ ಕೊಡಲಿ. ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ರಾಜೀನಾಮೆಗೆ ಒತ್ತಾಯಿಸಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡಲಿ. ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ, ಸ್ವಯಂಕೃತ ಅಪರಾಧದಿಂದ ಸರ್ಕಾರ ಇರುವುದು ಅನುಮಾನ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣ, ತಾಲೂಕು ಅಧ್ಯಕ್ಷ ಎನ್.ಹನುಮಂತರಾಯಪ್ಪ, ಕೆ.ಚಿದಾನಂದ, ಹೆಗ್ಗೆರೆ ಮಂಜುನಾಥ್, ರಾಜೇಂದ್ರ ಇತರರಿದ್ದರು.