ಸೇನಾ ಬಲಕ್ಕಿಂತ ನೈತಿಕ ಬಲ ಶಕ್ತಿಶಾಲಿ

SIRIGERE 21 (2)
Published on

ಸಿರಿಗೆರೆ: ದೇಶವೊಂದು ಶಕ್ತಿಶಾಲಿ ಆಗಲು ಸೇನೆ, ಹಣ ಬಲದಿಂದ ಆಗುವುದಿಲ್ಲ. ನೈತಿಕತೆ, ಆಧ್ಯಾತ್ಮಿಕ, ಭೌತಿಕ ಶಕ್ತಿ ಸಾಧಿಸುವ ದೇಶ ಮಾತ್ರ ಬಲಶಾಲಿ ಆಗುತ್ತದೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಎರಡನೇ ದಿನ ಗುರುವಾರದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆದ್ದರಿಂದ ದೇಶವನ್ನು ನೈತಿಕ ಶಕ್ತಿ ಮೇಲೆ ಕಟ್ಟುವ ಪ್ರಯತ್ನವನ್ನು ನಮ್ಮ ಪೂರ್ವಿಕರು, ಸಂತರು, ಸಾಧಕರು ಮಾಡಿದ್ದಾರೆ. ಅವರ ಆಶಯಗಳನ್ನು ಅರಿತು ಪಾಲಿಸುವ ಪ್ರಯತ್ನ ಮಾಡಬೇಕು ಎಂದರು.

ಚಂದ್ರಯಾನ 3 ದೇಶದ ವಿಜ್ಞಾನಿಗಳ ಶ್ರಮಕ್ಕೆ ಸಂದ ಯಶಸ್ಸು. ಈ ಕ್ಷೇತ್ರದಲ್ಲಿ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಓದಿದವರು ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸಿದ್ದು ನಮ್ಮಲ್ಲಿ ಹೆಚ್ಚು ಹೆಮ್ಮೆ ತರಿಸಿತು. ಅವರೊಂದಿಗೆ ಶುಕ್ರವಾರ ಸಂವಾದ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನನ್ನ ತಂದೆ ಬಂಗಾರಪ್ಪ ಮತ್ತು ಹಿರಿಯ ಗುರುಗಳ ಬಾಂಧವ್ಯ ಅನನ್ಯವಾಗಿತ್ತು ಎಂದು ಕೆಲ ಘಟನೆಗಳ ಮೂಲಕ ನೆನಪಿಸಿಕೊಂಡರು.

ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಮಾತನಾಡಿ, ಬಸವತತ್ವ ಪಾಲನೆ ಮಾಡುವ ಮಠಾಧೀಶರು, ನಾವುಗಳು ಹಾದಿ ತಪ್ಪದಂತೆ ಸರಿದಾರಿ ತರುವ ಕೆಲಸ ಮಾಡುತ್ತಿದ್ದರೆ, ಸಿರಿಗೆರೆ ಶ್ರೀಗಳು ಒಂದು ಹೆಜ್ಜೆ ಮುಂದೆ ಹೋಗಿ ಈ ಭಾಗದ ಭಗೀರಥರಾಗಿದ್ದಾರೆ ಎಂದರು.

ಕಡೂರು ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಈ ಭಾಗದ ರೈತರಿಗೆ ನೊಂದವರಿಗೆ ಯಾವರಿ ೀತಿ ಸಹಾಯ ಮಾಡಬಹುದು ಎಂಬುದನ್ನು ಸಿರಿಗೆರೆ ಮಠದ ಸ್ವಾಮೀಜಿ ಕಾರ್ಯಗಳನ್ನು ಗಮನಿಸಿದರೆ ಗೊತ್ತಾಗುತ್ತದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಬರ ಆವರಿಸಿದ ಮಧ್ಯ ಕರ್ನಾಟಕದ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದವರು ಲಿಂಗೈಕ್ಯ ಗುರುಗಳು. ಅದೇ ರೀತಿ ಈಗಿನ ಸ್ವಾಮೀಜಿ ಶಿಕ್ಷಣ, ಜಲಕ್ರಾಂತಿ ಮಾಡಿ ಕೃಷಿಕರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಶ್ರೀಮಠದ ಸಂಸ್ಕಾರ, ಸಂಪರ್ಕ ನನ್ನ ಜೀವನದಲ್ಲಿನ ಅಂಧಕಾರ ತೊಲಗಿಸಿ ಸಂಸ್ಕಾರ ಮೂಡಿಸಿದೆ ಎಂದರು.

ಚನ್ನಗಿರಿ ಶಾಸಕ ಶಿವಗಂಗಾ ಪ್ರಕಾಶ್ , ಮಾಜಿ ಸಚಿವ ಎಚ್.ಆಂಜನೇಯ, ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿಗಳ ಎಚ್.ಬಿ.ರಂಗನಾಥ್, ವಾಮದೇವಪ್ಪ ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಮಲ್ಲಕಂಬ, ಯಕ್ಷಗಾನ, ವಿವಿಧ ನೃತ್ಯ, ಸಂಗೀತ ಕಾರ್ಯಕ್ರಮ ನಡೆಯಿತು.

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರು: ಜಾನಪದ ನೃತ್ಯ: ತರಳಬಾಳು ಆಂಗ್ಲ ಮಾಧ್ಯಮ ಶಾಲೆ, ಮೆಳ್ಳೆಕಟ್ಟೆ (ಪ್ರ), ದಾವಣಗೆರೆ ತರಳಬಾಳು ಸಿಬಿಎಸ್‌ಸಿ ಶಾಲೆ, ಅನುಭವುಂಟಪ (ದ್ವಿ), ಮಾನಸ ಗಂಗೋತ್ರಿ ವಿದ್ಯಾಲಯ, ಹುಲಿಕಲ್ (ತೃ).
ವಚನ ನೃತ್ಯ: ತರಳಬಾಳು ಸಿಬಿಎಸ್‌ಸಿ ಹಿರೇಕೆರೂರು (ಪ್ರ), ಮಾನಸ ಗಂಗೋತ್ರಿ ವಿದ್ಯಾಲಯ, ಹುಲಿಕಲ್ (ದ್ವಿ), ತರಳಬಾಳು ಪ್ರಾಥಮಿಕ ಶಾಲೆ, ಸಿರಿಗೆರೆ (ತೃ).
ಸಿಬಿಎಸ್‌ಸಿ ಹಿರೇಕೆರೂರು ಶಾಲೆಯ ವಿದ್ಯಾರ್ಥಿಗಳಿಂದ ನುಲಿಯ ಚಂದಯ್ಯ ಕಿರು ನಾಟಕ ಪ್ರದರ್ಶನ, ತರಳಬಾಳು ಕಲಾಸಂಘದ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶಿಸಿದರು.

ಆರೋಗ್ಯ ತಪಾಸಣೆ ಶಿಬಿರ: ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಸೆ.23ರ ಶನಿವಾರ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಎಸ್‌ಎಸ್ ಹೈಟೆಕ್ ಆಸ್ಪತ್ರೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಎಂಬಿಆರ್ ಕಾಲೇಜ್, ಸಿರಿಗೆರೆ ರಕ್ತ ನಿಧಿ ಕೇಂದ್ರ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದೆ.

ನಿವೃತ್ತ ನೌಕರರ ಸಮಾವೇಶ: ತರಳಬಾಳು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ನಿವೃತ್ತ ನೌಕರರ ಸಮಾವೇಶ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ, ಶಾಸಕರಾದ ಲತಾ ಮಲ್ಲಿಕಾರ್ಜುನ್, ಪ್ರಕಾಶ್ ಕೋಳಿವಾಡ್, ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ, ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್, ಬೆಂಗಳೂರು ಯುಆರ್ ರಾವ್ ಉಪಗ್ರಹ ಕೇಂದ್ರದ ವಿಜ್ಞಾನಿ ರಾಮನಗೌಡ, ಇಸ್ರೋ ವಿಜ್ಞಾನಿ ಡಾ.ಬಿ.ಎಚ್.ಎಂ.ದ್ವಾರಕೇಶ್, ಗೋವಿಂದರಾಜ ಶೆಟ್ಟಿ, ಆನಂದ ಆರ್.ಪಾಟೀಲ್ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net